ಮಧುಗಿರಿ: ಜಾನಪದ ಕಲೆಯ ತಾಯಿಬೇರುಗಳಾದ ಯಕ್ಷಗಾನ, ಮೂಡಲಪಾಯ, ಬಯಲಾಟ ಕಲೆಗಳನ್ನು ಸಂರಕ್ಷಿಸಿದರೆ ಜಾನಪದದ ಅಸ್ವಿತ್ವಕ್ಕೆ ಧಕ್ಕೆ ಬಾರದು ಎಂದು ಆದಾಯ ತೆರಿಗೆ ಆಯುಕ್ತರಾದ ಜಯರಾಮ್ ರಾಯಪುರ ಪ್ರತಿಪಾದಿಸಿದರು.
ಬಯಲುಸೀಮೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಪುರಾತನ ಕಾಲದಿಂದಲೂ ನೆಲೆಗೊಂಡಿರುವ ಮೂಡಲಪಾಯ ಬಯಲಾಟ ಕಲೆ ಉಳಿವಿಗಾಗಿ ಭಾಗವತರನ್ನು ಒಂದುಗೂಡಿಸಲು ಜಾನಪದ ಒಡನಾಡಿಗಳೊಂದಿಗೆ ಕ್ಷೇತ್ರ ಪರ್ಯಟನೆ ಕೈಗೊಂಡಿರುವ ಅವರು ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ನಂತರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಲಿಗಳನ್ನು ಸಂರಕ್ಷಿಸುವ ಟೈಗರ್ ಪ್ರಾಜೆಕ್ಟ್ ಯೋಜನೆಯಿದೆ. ಹುಲಿಗಳ ಉಳಿಸಬೇಕು ಎಂದರೆ ಮೊದಲು ಬೇಟೆ ಪ್ರಾಣಿಗಳನ್ನು ಉಳಿಸಿ ಜೀವಿ ಸಮತೋಲನ ಕಾಯ್ದು ಕೊಳ್ಳಬೇಕು. ಆಗೆಯೇ ಜಾನಪದ ಕಲೆ ಉಳಿಸಬೇಕೆಂದರೆ ಯಕ್ಷಗಾನ, ಬಯಲಾಟ ಸೇರಿದಂತೆ ಜಾನಪದರ ಬಾಯಲ್ಲಿರುವ ಕಲೆಗಳನ್ನು ಉಳಿಸುವುದು ಅನಿವಾರ್ಯ ಎಂದರು.
ನಾನು ಅಧಿಕಾರಿಯಾಗಿ ಅಕ್ಷರ ತಿಳಿದವನಾಗಿ ನಮ್ಮ ಕಣ್ಣಮುಂದೆಯೇ ನಶಿಸುತ್ತಿರುವ ಕಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಕೈಜೋಡಿಸದಿದ್ದರೆ ಆತ್ಮ ವಂಚನೆ ಮಾಡಿಕೊಂಡಂತಾಗುತ್ತದೆ ಎಂಬ ಕಾರಣಕ್ಕೆ ಜಾನಪದ ವಿದ್ವಾಂಸರೊಂದಿಗೆ ಸೇರಿ ಭಾಗವತರನ್ನು ಒಂದುಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಫೆಬ್ರವರಿ ತಿಂಗಳಲ್ಲಿ ಚಿಕ್ಕಬಳ್ಳಾಪುರ ದಲ್ಲಿ ಎರಡು ದಿನಗಳ ಮೂಡಲಪಾಯ ಸಮ್ಮೇಳನ ಹಮ್ಮಿಕೊಂಡಿದ್ದೇವೆ ಎಂದರು.
ಇಂದಿನ ಅಧುನಿಕ ಯುಗದಲ್ಲಿ ಎಲ್ಲವೂ ಬದಲಾಗುತ್ತಿದೆ. ಅದಕ್ಕೆ ತಕ್ಕನಾಗಿ ಜಾನಪದ ಕಲೆಗಳಲ್ಲೂ ಸುಧಾರಣೆ, ರೂಪಾಂತರ ತಂದರೆ ಪ್ರೇಕ್ಷಕರಿಗೆ ಆಕರ್ಷಣೆಯಾಗಿ ಉಳಿಯಲಿದೆ. ಬಯಲಾಟ, ಯಕ್ಷಗಾನದ ಪ್ರಸಂಗದಿಂದ ಪ್ರಸಂಗದ ಮಧ್ಯದ ವಿಳಂಬ ತಪ್ಪಿಸುವುದು. ನೋಡುಗರ ಚಿತ್ತ ಅನ್ಯಯೋಚನೆಗಳತ್ತ, ಮೊಬೈಲ್ ನತ್ತ ತೆರಳದಂತೆ ನಿರಂತರ ಗಮನ ಹಿಡಿದಿಟ್ಟುಕೊಳ್ಳುವ ಶೈಲಿ ಅಳವಡಿಕೆಯ ಸವಾಲುಗಳು ಈ ಕಲೆಗಳ ಮುಂದಿವೆ. ಹೊಸ ಕಲಾವಿದರನ್ನು ಸೃಷ್ಟಿಸುವುದು, ತರಬೇತಿ ನೀಡುವುದು. ಇರುವ ಭಾಗವತರ ಬಳಿಯ ಕಲೆಯನ್ನು ನವಪೀಳಿಗೆ ವರ್ಗಾಯಿಸುವುದು ಇಂದಿನ ತುರ್ತು ಎಂದು ಅಭಿಪ್ರಾಯ ಪಟ್ಟರು.
ಮಧುಗಿರಿ ತಾಲೂಕು ಬಯಲಾಟದ ಕಲೆಯ ತವರೂರು. ಇಲ್ಲಿನ ಕಲಾವಿದರು ತಮ್ಮ ತಮ್ಮ ಊರಲ್ಲೇ ರಂಗಪ್ರಯೋಗ ಮಾಡುತ್ತಿರುತ್ತಾರೆ. ಇವರನ್ನು ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಕ್ಕೆ ಕರೆಸಿ ಪ್ರದರ್ಶನ ಕೊಡಿಸಿ ಪ್ರೋತ್ಸಾಹ, ಪ್ರೇರಣೆ ನೀಡಿದರೆ ಅವರಲ್ಲೂ ತಮ್ಮಲ್ಲಿರುವ ಕಲೆಯ ಮಹತ್ವದ ಅರಿವಾಗಿ ಮತ್ತಷ್ಡು ಉತ್ಸಾಹದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುವಂತಾಗಿದೆ. ಸಾಹಿತ್ಯ, ಕಲೆ, ಸಂಗೀತ ಇವೆಲ್ಲಾ ಶ್ರೋತೃ, ಪ್ರೇಕ್ಷಕರಿಗೆ ಜ್ಞಾನ, ಮನರಂಜನೆ, ದೇಸಿ ಚಿಂತನೆ ನೀಡುವುದಲ್ಲದೆ ಕವಿ, ಕಲಾವಿದರಿಗೂ ಗುರುತು ತಂದುಕೊಡುತ್ತವೆ. ಗುರುತಿಸಿ ಬೆನ್ನು ತಟ್ಟುವವರೂ ಬೇಕು ಎಂದು ಜಯರಾಮ್ ರಾಯಪುರ ಹೇಳಿದರು.
ಜಾನಪದ ವಿದ್ವಾಂಸರು, ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡರು ಮಾತನಾಡಿ, ನೆಲೆಯಲ್ಲಿಯೇ ಜಾನಪದ ಕಲೆ ಉಳಿಸಿಕೊಳ್ಳುವ ಕಾರ್ಯವಾಗಬೇಕು. ಮಧುಗಿರಿಯಲ್ಲೇ ಬಯಲಾಟ ತಂಡಗಳ ಪ್ರದರ್ಶನ ಏರ್ಪಡಿಸಿ ನಾವು ಬೆಂಬಲ ನೀಡುತ್ತೇವೆ. ಪಟ್ಟಣದಲ್ಲೇ ಸಾಹಿತ್ಯ ಪರಿಷತ್ ಆಡಿಟೋರಿಯಂ ಇದೆ. ಸ್ಥಳೀಯ ಆಡಳಿತ ತಹಶೀಲ್ದಾರ್ ಅವರು ಪ್ರೋತ್ಸಾಹ ನೀಡುತ್ತಾರೆಂದು ಹೇಳುವಿರಿ ಇಲ್ಲೇ ಜಾನಪದ ಸಮ್ಮೇಳನ ಏರ್ಪಡಿಸಿ ನಾವೂ ಬಂದು ಸಲಹೆ ಸಹಕಾರ ನೀಡುತ್ತೇವೆ. ನಮ್ಮಲ್ಲಿಗೂ ಕಲಾವಿದರು ಬರಲಿ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಹನಾ ನಾಗೇಶ್ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಜಾನಪದ ವಿದ್ವಾಂಸರು, ಚಿಂತಕರೂ ಆದ ಚಿಕ್ಕಣ್ಣ ಯಣ್ಣೆಕಟ್ಟೆ, ಹೆಚ್.ಡಿ.ನರಸೇಗೌಡ, ಉದಯಶಂಕರ್, ಆರ್ಯವೈಶ್ಯ ಮಂಡಲಿ ಸಂಘದ ಅಧ್ಯಕ್ಷರಾದ ಕೆ ಎನ್ ಶ್ರೀನಿವಾಸ್ ಮೂರ್ತಿ, ಪತ್ರಕರ್ತ ಎಂ.ಎಸ್.ರಘುನಾಥ್ ಮತ್ತು ಅಂಕಿತ್ ರಘುನಾಥ್ ಮತ್ತಿತರಿದ್ದರು.
ವರದಿ: ಅಬಿದ್, ಮಧುಗಿರಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700