ತುರುವೇಕೆರೆ: ತಾಲೂಕಿನ ಸುತ್ತಮುತ್ತ ಗ್ರಾಮದಲ್ಲಿ ಕೊಬ್ಬರಿ ಕಳ್ಳತನ ಹೆಚ್ಚಾಗಿದ್ದು, ರಾತ್ರಿ ಆಗೋದನ್ನೇ ಕಾಯುವ ಕಳ್ಳರು, ವ್ಯವಸ್ಥಿತವಾಗಿ ಕಳ್ಳತನ ನಡೆಸುತ್ತಿದ್ದು, ಕಳ್ಳತನಕ್ಕೂ ಮೊದಲು ಸಿಸಿ ಕ್ಯಾಮರಾಗಳ ಕೇಬಲ್ ಕಟ್ ಮಾಡಿ, ಸಾಕ್ಷಿ ನಾಶ ನಡೆಸುತ್ತಿದ್ದಾರೆ. ಕಳ್ಳರ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಇನ್ನು ಇದೇ ತಿಂಗಳ 13ನೇ ತಾರೀಕಿನಂದು ತಾಲೂಕಿನ ಗೋಣಿ ತುಮಕೂರು ಗ್ರಾಮದ ವಾಸಿಯಾದ ರವೀಂದ್ರ ಕುಮಾರ್ ಅವರ ಮನೆಯಲ್ಲಿ ರಾತ್ರಿ 2 ಗಂಟೆಯ ಸುಮಾರಿಗೆ 1.68 ಲಕ್ಷ ರೂಪಾಯಿ ಬೆಲೆ ಬಾಳುವ 48 ಚೀಲ ಕೊಬ್ಬರಿಯನ್ನು ಕಳವು ಮಾಡಲಾಗಿದೆ. ಕಳ್ಳತನಕ್ಕೂ ಮೊದಲು ಸಿಸಿ ಟಿವಿಯ ಕೇಬಲ್ ಕಟ್ ಮಾಡಿರೋದೇ ಅಲ್ಲದೇ ಸಿಸಿ ಕ್ಯಾಮರಾದ ಕಣ್ಣಿಗೆ ಸೆಗಣಿ ಮೆತ್ತಿ, ಮನೆಗೆ ಹೊರಗಿನಿಂದ ಚಿಲಕ ಹಾಕಿ ಮನೆಯಿಂದ ಯಾರೂ ಹೊರಗೆ ಬಾರದಂತೆ ಕಳ್ಳರು ಕೈಚಳಕ ತೋರಿಸಿದ್ದಾರೆ.
ಕಳ್ಳತನಕ್ಕೂ ಮೊದಲು ಅಶೋಕ್ ಲೈಲ್ಯಾಂಡ್ ಎಂಬ ಗೂಡ್ಸ್ ವಾಹನ ಮನೆಯ ಪಕ್ಕದ ರಸ್ತೆ ಬದಿಯಲ್ಲಿ ಸುಮಾರು ಹೊತ್ತಿನವರೆಗೆ ನಿಂತಿತ್ತು. ಇದೇ ವಾಹನ ರಸ್ತೆಯಲ್ಲಿ ಚಲಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದೇ ರೀತಿಯ ಕಳವು ಪ್ರಕರಣಗಳು ತಾಲೂಕಿನ ಮೇಘಲಹೊರಗೆರೆಹಳ್ಳಿ, ಶಿವಪುರ, ಬಿಗಿನೇನಹಳ್ಳಿ, ಸಾದರಹಳ್ಳಿಗಳಲ್ಲೂ ಕಳೆದ 10 ರಿಂದ 15 ದಿನಗಳಲ್ಲಿ ನಡೆದಿದೆ ಎನ್ನಲಾಗಿದೆ.
ಘಟನೆ ಸಂಬಂಧ ತುರುವೇಕೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲ್ ನಾಯಕ್ ಮತ್ತು ಸಬ್ ಇನ್ಸ್ ಪೆಕ್ಟರ್ ಕೇಶವಮೂರ್ತಿ ಅವರ ನೇತೃತ್ವದ ತಂಡ ಕೊಬ್ಬರಿ ಕಳ್ಳರ ಎಡೆಮುರಿ ಕಟ್ಟಲು ತನಿಖೆಯನ್ನು ಚುರುಕಾಗಿಸಿದ್ದಾರೆ.
ವರದಿ: ಸುರೇಶ್ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz