ತಿಪಟೂರು: ಕಲ್ಪೋತ್ಸವದ ಎರಡನೇ ದಿನವಾದ ಗುರುವಾರದ ಜನಪದ ಸಂಭ್ರಮದಲ್ಲಿ ನಗರದ ಕೆಂಪಮ್ಮ ದೇವಸ್ಥಾನದಿಂದ ಕಲ್ಪತರು ಕ್ರೀಡಾಂಗಣದವರೆಗೆ ಅಂಬಾರಿ ಉತ್ಸವ ನಡೆಯಿತು.
ತಾಲ್ಲೂಕು ಆಡಳಿತ, ಕಲಾಕೃತಿ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾನಪದ ಸಂಭ್ರಮಕ್ಕೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ 22 ವರ್ಷದ ಆನೆ ಲಕ್ಷ್ಮಿ ಎಂಬ ಹೆಣ್ಣು ಆನೆ ಮೇಲೆ ಅಂಬಾರಿಯನ್ನಿಟ್ಟು ಕನ್ನಡಾಂಬೆಯ ಭಾವ ಚಿತ್ರದೊಂದಿಗೆ ಉತ್ಸವ ಜರುಗಿತು.
ಉತ್ಸವದಲ್ಲಿ ಬೆಳ್ಳಿರಥದಲ್ಲಿ ಹೊಸಳ್ಳಿ ಪುರದ ಬಸವೇಶ್ವರ ವಿಗ್ರಹ, ಕುದುರೆ, ಎತ್ತು ಹಸು ನಗಾರಿ, ನಂದಿಧ್ವಜ ಕುಣಿತ, ವೀರಗಾಸೆ, ಸೋಮನ ಕುಣಿತ, ನಾನಾ ಜನಪದ ಕಲಾ ತಂಡಗಳ ಮೆರವಣಿಗೆ, ಕನ್ನಡದ ಕೆಂಪು ಹಳದಿ ಬಾವುಟಗಳು ರಾರಾಜಿಸಿತು.
ವಿವಿಧ ವಾದ್ಯಗಳೊಂದಿಗೆ ತೆರೆದ ವಾಹನದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಜೊತೆಗೂಡಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಮಹಿಳೆಯರು ಪುರುಷರು ತಲೆಗೆ ಪೇಟ ಧರಿಸಿ ಸಂಭ್ರಮಿಸಿದರು.
ಕ್ರೀಡಾಂಗಣದಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ, ಮನರಂಜನಾ ಕ್ರೀಡಾಕೂಟಗಳು ನಡೆದವು. ರಂಗಗೀತೆಗಳ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು. ಹಿರಿಯರ ವಿಭಾಗದಲ್ಲಿ ತರುಣ್ ಪ್ರಥಮ, ಸರಸ್ವತಿ ದ್ವಿತೀಯ, ಸಿಯಾ ಎಂ. ಪಟೇಲ ತೃತಿಯ, ಕಿರಿಯರ ವಿಭಾಗದಲ್ಲಿ ತನ್ಮಯಿ ಚೈತನ್ಯ ಪ್ರಥಮ, ಚಿನ್ಮಯ್ ಗೌಡ ದ್ವಿತೀಯ, ಚಿಂತನ ಎನ್.ಆರ್. ತೃತೀಯ ಸ್ಥಾನ ಪಡೆದರು. ಮಕ್ಕಳ ಸಾಹಿತ್ಯ ಸಮ್ಮೇಳನ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಸಮ್ಮೇಳನಾಧ್ಯಕ್ಷೆ ಸೆಂಟ್ರಲ್ ಶಾಲೆಯ ಕಾವೇರಿ ಮಾತನಾಡಿ, ಮಕ್ಕಳ ಸಾಹಿತ್ಯ ಕೇವಲ ಕಥೆ, ಕವನ, ಕವಿತೆಗಳಿಗೆ ಸೀಮಿತವಾಗದೆ ಅವರ ಕನಸು, ಆತ್ಮವಿಶ್ವಾಸ ಚಿಂತನೆಗಳನ್ನು ಕಟ್ಟುವ ಪೀಠಿಕೆ ಆಗಬೇಕು. ಭಾಷೆ, ನಾಡು, ಸಂಸ್ಕೃತಿ ಬಗ್ಗೆ ಪ್ರೀತಿ ಗೌರವ ಬೆಳೆಸುವುದು ಮಕ್ಕಳ ಸಾಹಿತ್ಯ ಸಮ್ಮೇಳನದ ವಿಶೇಷತೆಯನ್ನು ಅರಿಯಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಕಂಚಾಘಟ್ಟದ ರುದ್ರಮುನಿ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಉಪವಿಭಾಗಧಿಕಾರಿ ಸಪ್ತಶ್ರೀ ಬಿ.ಕೆ., ಕಲಾಕೃತಿ ಸಂಸ್ಥೆ ಅಧ್ಯಕ್ಷ ಶ್ರೀಧರ್, ತಹಶೀಲ್ದಾರ್ ಮೋಹನ್ ಕುಮಾರ್, ತಾ.ಪಂ. ಇಒ ಸುದರ್ಶನ್, ಕಸಾಪ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಡಿವೈಎಸ್ ಪಿ ಜಯಲಕ್ಷಮ್ಮ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


