ಬೆಂಗಳೂರು: ನಾಡಿನ ಹೆಸರಾಂತ ಬರಹಗಾರರು, ಸಾಹಿತಿಗಳು, ಕಲಾವಿದರು, ಚಿಂತಕರು ಭಾಷೆ, ನೆಲ, ಜಲ, ಅಭಿವೃದ್ಧಿಗೆ ಶ್ರಮಿಸುತ್ತಿದ್ದರು ಕೂಡ ಕೆಲವರು ರಾಜಕೀಯ ಪಕ್ಷದ ಪರವಾಗಿ ಧ್ವನಿಯೆತ್ತಿ ತಮ್ಮತನವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇದು ಕನ್ನಡ ಭಾಷೆ, ನೆಲ, ಜಲ ಮತ್ತು ಕನ್ನಡ ಅಭಿವೃದ್ಧಿಗೆ ಅಪಾಯ ತಂದೊಡ್ಡುತ್ತಿದ್ದಾರೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜುಡಿಷಿಯಲ್ ಲೇಔಟ್ ನಲ್ಲಿ ಬಡಾವಣೆಯ ಕನ್ನಡ ಕಸ್ತೂರಿ ಸಂಘ ಹಾಗೂ ವಿವಿಧ ಸಂಘಟನೆಗಳೊಂದಿಗೆ ಆಯೋಜಿಸಿದ್ದ ಅದ್ದೂರಿಯ 70 ನೇ ಕನ್ನಡ ರಾಜೋತ್ಸವದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ಕೆಲವು ಸಮಿತಿಗಳಲ್ಲಿ, ಪ್ರಾಧಿಕಾರಗಳಲ್ಲಿ ಅಧ್ಯಕ್ಷರು, ಸದಸ್ಯರು ಆಗಲು ಮತ್ತು ಪ್ರಶಸ್ತಿಗಳನ್ನು ಪಡೆದುಕೊಳ್ಳಲು ರಾಜಕಾರಣಿಗಳ ಜೊತೆ ಲಾಭಿ ನಡೆಸಿ ಅಧಿಕಾರ ಅನುಭವಿಸಲು ಹಾತೊರೆಯುತ್ತಿರುವುದರಿಂದ ಕನ್ನಡ ಸಾಹಿತ್ಯದ ಬೆಳವಣಿಗೆ ಕುಂಠಿತಗೊಂಡಿದೆ ಎಂದರು.

ಜೊತೆಗೆ ಉತ್ತರ ಭಾರತದಿಂದ ಉದ್ಯೋಗ ಅರಸಿ ಬರುವ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಈ ಬಗ್ಗೆ ಧ್ವನಿಯೆತ್ತ ಬೇಕಾಗಿದ್ದ ನಾಡಿನ ಸಾಹಿತಿಗಳು, ಚಿಂತಕರು, ಬರಹಗಾರರು ರಾಜಕೀಯ ಪಕ್ಷಗಳ ಜೊತೆ ಕೈಜೋಡಿಸಿರುವುದು ಕನ್ನಡಿಗರ ದೌರ್ಭಾಗ್ಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಮತ್ತು ಯುವ ಸಾಹಿತಿಗಳನ್ನು ಉತ್ತೇಜಿಸಿ ಕನ್ನಡದ ಸಾಹಿತ್ಯವನ್ನು ಪಸರಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ ಇಂದು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಲ್ಲಿ ರಾಜಕೀಯ ಪ್ರೇರಿತ ಆಡಳಿತ ನಡೆಯುತ್ತಿದ್ದು ಇದರಿಂದ ಕನ್ನಡಕ್ಕೆ ಹಾನಿ ಉಂಟಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಕಸ್ತೂರಿ ಸಂಘದ ಕೆಂಪಣ್ಣ ಮಾತನಾಡಿ ನ್ಯಾಯಾಂಗ ಬಡಾವಣೆಯಲ್ಲಿ ಕನ್ನಡೇತರರಿಗೆ ನಮ್ಮ ಭಾಷೆ ಕಲಿಸುವ ಕಾರ್ಯಗಳು ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಜಿ.ಸದಾಶಿವಯ್ಯ ಸೇರಿದಂತೆ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರುಗಳು, ಬಡಾವಣೆಯ ನಿವಾಸಿಗಳು ಮತ್ತು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


