ನೆಲಮಂಗಲ: ಪಟ್ಟಣದ ಶ್ರೀ ಕ್ಷೇತ್ರ ಪವಾಡ ಶ್ರೀ ಬಸವಣ್ಣದೇವರ ಮಠದ ಆವರಣದಲ್ಲಿ ಕರ್ನಾಟಕ ರಣಧೀರರ ವೇದಿಕೆ ಸಂಘಟನೆ ವತಿಯಿಂದ ಎರಡನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು ಶ್ರೀಭುವನೇಶ್ವರಿ ಹಬ್ಬ ಹಾಗೂ ಹೊಯ್ಸಳ ವಿಶಿಷ್ಟ ಸೇವಾ ಪುರಸ್ಕಾರ ಸಮಾರಂಭವು ಜರುಗಿತು.
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡಿಗರ ಆರಾಧ್ಯ ದೇವಿ ಭುವನೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ರವರು ಲೋಕಾರ್ಪಣೆ ಮಾಡಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ವಿವಿಧ ರಂಗಗಳಲ್ಲಿ ವಿಶಿಷ್ಟವಾದ ಸೇವೆಯನ್ನು ಮಾಡಿದಂತಹ ಸಾಧಕರಿಗೆ, ಕನ್ನಡಪರ ಹೋರಾಟಗಾರರಿಗೆ, ಮತ್ತು ಪತ್ರಕರ್ತರಿಗೆ ಕರ್ನಾಟಕ ರಣಧೀರರ ವೇದಿಕೆ ಸಂಘಟನೆಯು ಹೊಯ್ಸಳ ವಿಶಿಷ್ಟ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘಟನೆ ವತಿಯಿಂದ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿರವರಿಗೆ ಮತ್ತು ಶ್ರೀ ಕ್ಷೇತ್ರ ಪವಾಡ ಶ್ರೀ ಬಸವಣ್ಣದೇವರ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿರವರಿಗೆ ಮತ್ತು ಪ್ರಖ್ಯಾತ ಶಿಲ್ಪಿಗಳಾದ ಜಗದೀಶ್ ಆಚಾರ್ಯ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಯಿ ಭುವನೇಶ್ವರಿಯ ಉತ್ಸವ ಮೂರ್ತಿಯ ಮೆರವಣಿಗೆ ಕಾರ್ಯಕ್ರಮವು ನೆಲಮಂಗಲ ನಗರದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಕನ್ನಡಪರ ಸಂಘಟನೆಗಳ ರಾಜ್ಯಾಧ್ಯಕ್ಷರುಗಳು, ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರೇಗೌಡ್ರು ರವರಿಗೆ ಸನ್ಮಾನವನ್ನು ಮಾಡಿ ಅಭಿನಂದಿಸಿ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸ್ಮರಣಾರ್ಥವಾಗಿ ಯುವಕರಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ವರದಿ: ಮಂಜುಸ್ವಾಮಿ ಎಂ.ಎನ್.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700