ತುಮಕೂರು: ಭಾರತದಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರು ಶಾಂತಿ ಮತ್ತು ಸಹಬಾಳ್ವೆಯಿಂದ ಎಲ್ಲ ಸಮುದಾಯದ ಜನರೊಂದಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವು ಮತೀಯ ದುಷ್ಕರ್ಮಿಗಳು ಚರ್ಚ್ ಗಳು, ಪಾದ್ರಿಗಳು ಹಾಗೂ ಕ್ರೈಸ್ತ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿದ್ದು, ದ್ವೇಷದ ಭಾಷಣದ ಮೂಲಕ ಏಕತೆಗೆ ಧಕ್ಕೆ ತರುತ್ತಿದ್ದು, ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಹರಿದ್ವಾರದಲ್ಲಿ ನಡೆದಿರುವ ಧರ್ಮ ಸಂಸತ್ ಸಭೆಯಲ್ಲಿ ಮತೀಯ ಭಾವನೆಯುಳ್ಳ ನಾಯಕರು ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಕಡಿತೀವಿ, ಬಡಿತೀವಿ ಎಂದು ಹೇಳಿಕೆ ನೀಡಿದರೂ ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಮಾತನಾಡದೇ ಇರುವುದು ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದೆ.
ತೇಜಸ್ವಿ ಸೂರ್ಯ ತನ್ನ ಮಾತುಗಳನ್ನು ವಾಪಸ್ ಪಡೆದಿದ್ದರೂ, ಈ ರೀತಿಯ ಮಾತುಗಳು ಸಮಾಜದ ಸೌಹಾರ್ದತೆಗೆ ಧಕ್ಕೆ ತರುತ್ತಿದೆ. ಪಾಂಡವಪುರದಲ್ಲಿ ಶಾಲೆಗೆ ನುಗ್ಗಿ ಕ್ರಿಸ್ಮಸ್ ಗೆ ಹಬ್ಬ ಆಚರಿಸದಂತೆ ತಡೆಯಲಾಗಿದೆ. ಗೋಕಾಕ್ ನಲ್ಲಿ ಕೆಲವು ವ್ಯಕ್ತಿಗಳು ಚರ್ಚ್ ಗೆ ನುಗ್ಗಿ ಪ್ರಾರ್ಥನೆ ಮಾಡುತ್ತಿರುವವರ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ಇನ್ನೊಂದೆಡೆಯಲ್ಲಿ ಏಸು ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಕ್ರೈಸ್ತ ಮಿಷನರಿಗಳ ಪಾದ್ರಿಗಳ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ ಕೇಸುಗಳನ್ನು ದಾಖಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಮತಾಂತರ ನಿಷೇಧ ಕಾಯ್ದೆ ಕೂಡ ಸಂವಿಧಾನ ವಿರೋಧಿ ಎಂದು ಹೇಳಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy