ಕೊರಟಗೆರೆ:ಕಾವೇರಿ ನೀರು ಕನ್ನಡಿಗರ ಸ್ವತ್ತು, ಆದರೆ ರಾಜ್ಯ ಸರ್ಕಾರ ತನ್ನ ರಾಜಕೀಯಕ್ಕೋಸ್ಕರಾ ಕಾವೇರಿ ನೀರನ್ನು ತಮಿಳು ನಾಡಿಗೆ ಹರಿಸುತ್ತಿದೆ ಎಂದು ಖಂಡಿಸಿ ರೈತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರಿಗೆ ಬಾರಿ ಕಾಲ್ನಡಿಗೆಯ ಮುಖಾಂತರ ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಹಶೀಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಬಂದ್‍ನ್ನು ಮಾಡಿದರು, ನಂತರ ಸೆ.29 ರಂದು ಇಡೀ ರಾಜ್ಯವನ್ನೇ ಬಂದ್ ಮಾಡುವಂತೆ ರಾಜ್ಯ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು ಅದರಂತೆ ಜಿಲ್ಲಾದ್ಯಂತ ಬಂದ್‍ಗಳು ನಡೆಯಿತು, ಕೊರಟಗೆರೆಯಲ್ಲೂ ಸಹ ಕರ್ನಾಟಕ ರಣಧೀರರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‍ಶೆಟ್ಟಿ ಬಣ), ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ, ದರ್ಶನ್ ಅಭಿಮಾನಿ ಬಳಗದವರಿಂದ ನಡೆದ ಶುಕ್ರವಾರದ ಕರ್ನಾಟಕ ಬಂದ್‍ನ ವೇಳೆ ಬೈಕ್ ರ್ಯಾಲಿ ನಡೆಸಿದರು, ಈ ಬಂದ್‍ಗೆ ಅಂಗಡಿ ಮಾಲಿಕರು, ವರ್ತಕರು, ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಕರ್ನಾಟಕ ರಣಧೀರರ ವೇದಿಕೆ ತಾ.ಅಧ್ಯಕ್ಷ ಮಂಜುಸ್ವಾಮಿ ಎಂ.ಎನ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರವಾಗಿ ಶತ ಶತಮಾನಗಳಿಂದಲೂ ಹೋರಾಟ ನಡೆಯುತ್ತಲೇ ಇದೆ, ಕನ್ನಡ ನಾಡಿನ ತಲಕಾವೇರಿಯಲ್ಲಿ ಉಗಮಿಸಿ ಒಟ್ಟು 13 ಜಿಲ್ಲೆಗೆ ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ರೈತರ ಹಾಗೂ ಸಾರ್ವಜನಿಕರ ಜೀವನಾಡಿಯಾಗಿರುವ ಕಾವೇರಿಯು ತಮಿಳು ನಾಡಿನ ಸರ್ಕಾರ ತಮಿಳು ನಾಡಿಗೆ ಅತಿ ಹೆಚ್ಚು ನೀರು ಬಿಡುವಂತೆ ಒತ್ತಡ ಮಾಡಿ ಕಾವೇರಿ ನೀರು ನಿರ್ವಾಹಣಾ ಸಮಿತಿಯಿಂದ ನಮ್ಮ ನಾಡಿಗೆ ಅನ್ಯಾಯವಾಗುವಂತೆ ಆದೇಶ ಹೊರಡಿಸಿಕೊಂಡು ನಾಡಿನ ರೈತಾಪಿ ವರ್ಗಕ್ಕೆ ಪ್ರತಿಬಾರಿಯೂ ಅನ್ಯಾಯವನ್ನೇ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಆದ್ದರಿಂದ ಒಕ್ಕೂಟ ಭಾರತ ಸರ್ಕಾರದ ಅಧಿಕಾರಿಗಳು ಜಂಟಿ ನಿಯೋಗವನ್ನು ರಚಿಸಿ ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ನದಿಯ ಪ್ರಾಂತ್ಯದ ಜಮೀನು ಬೆಳೆ, ಕುಡಿಯಲು ಬಳಸುವ ನೀರಿನ ಪ್ರಮಾಣ ಕಾವೇರಿಯ ಕೃಷ್ಣರಾಜಸಾಗರ ಜಲಶಾಯದಲ್ಲಿ ಕಾವೇರಿ ನೀರಿನ ಶೇಖರಣಾ ಮಟ್ಟ ಹಾಗೂ ಒಳ ಹರಿವು-ಹೊರ ಹರಿವಿನ ವರದಿಯನ್ನು ಅವಲೋಕಿಸಿ ಕನ್ನಡ ನಾಡಿಗೆ ಕಾವೇರಿ ನೀರಿನ ಅಂಚಿಕೆಯಲ್ಲಿ ಅನ್ಯಾಯವಾಗುತ್ತಿರುವುದನ್ನು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಸೂಕ್ತವಾದ ನ್ಯಾಯವನ್ನು ಕನ್ನಡ ನಾಡಿಗೆ ಒದಗಿಸಿಕೊಡಬೇಕೆಂದು ಅಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾ.ಅಧ್ಯಕ್ಷ ಸಿದ್ದರಾಜು ಮಾತನಾಡಿ, ನಾಡಿನ ಅತಿಹೆಚ್ಚು ಜನಸಂಖೈಯುಳ್ಳ ಬೆಂಗಳೂರಿನಲ್ಲಿಯೇ ಕುಡಿಯಲು ನೀರಿಲ್ಲ, ಮುಂದಿನ ಲೋಕಸಭಾ ಚುನಾವಣಾ ಗಿಮಿಕ್‍ನಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಬಿಡುತ್ತಿದೆ, ಇದು ಜಲ ಸಂಪನ್ಮೂಲ ಸಚಿವರಿಗೆ ನಾಚಿಕೆಗೇಡಿನ ಸಂಗತಿ, ನ್ಯಾಯಲಯದ ಮತ್ತು ಪ್ರಾಧಿಕಾರದ ಆದೇಶವನ್ನು ಪಾಲಿಸಿ ಕನ್ನಡಿಗರಿಗೆ ಮಣ್ಣು ತಿನ್ನಿಸಲು ರಾಜ್ಯ ಸರ್ಕಾರ ಹೊರಟಿದೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಲಿಸಿದಂತೆ ಕಾಂಗ್ರೆಸ್ ಸರ್ಕಾರಕ್ಕೂ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ


