ಸರಗೂರು: ತಾಲ್ಲೂಕಿನ ಯಶವಂತಪುರ ಗ್ರಾಮದಲ್ಲಿ ಇಂದು ಸಣ್ಣ ಏತ ನೀರಾವರಿ ಇಲಾಖೆ ವತಿಯಿಂದ ಗ್ರಾಮದ ಗೂಡುಕಟ್ಟೆ, ಬಾಲನಕಟ್ಟೆ ಕೆರೆಗಳ ಸಂಪೂರ್ಣ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗಯ್ಯ ಯಶವಂತಪುರ, ಸಾಕಷ್ಟು ವರ್ಷಗಳಿಂದ ಪಾಳು ಬಿದ್ದಿದ್ದ ಕೆರೆಗಳಿಗೆ ಜೀವ ತುಂಬಿದಂತಾಗಿದೆ. ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ಬಾಲನಕಟ್ಟೆಯನ್ನು ಅಳತೆ ಮಾಡಿಸಬೇಕಿದೆ. ಈ ಪ್ರಯತ್ನ ಸಹ ಸನಿಹದಲ್ಲಿದ್ದು, ತಹಸೀಲ್ದಾರರ ಗಮನ ಸೆಳೆಯಲಾಗಿದೆ. ಶೀಘ್ರವಾಗಿ ಕ್ರಮ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂಬ ಭರವಸೆಯಿದೆ ಎಂದರು.
ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಲು ಕೆರೆಯ ಸುತ್ತಮುತ್ತಲ ಜಮೀನಿನ ರೈತರು ಮತ್ತು ಸಾರ್ವಜನಿಕರು ಸಹಕರಿಸಬೇಕು ಕೆರೆಗಳ ಅಭಿವೃದ್ದಿ ಬಗ್ಗೆ ತಾಲ್ಲೂಕಿನ ಶಾಸಕರಾದ ಅನಿಲ್ ಚಿಕ್ಕಮಾದುರವರು ಕಳೆದ ಮೂರು ವರ್ಷಗಳ ನಮ್ಮ ಸತತ ಪ್ರಯತ್ನಕ್ಕೆ ಸಂಪೂರ್ಣವಾದ ಸಹಕಾರ ನೀಡಿ ಯೋಜನೆ ಅನುಷ್ಠಾನಗೊಳ್ಳಲು ಸಹಕರಿಸಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಶಾಸಕರ ಸಹಕಾರದಿಂದ ಇಂದು ಕೆರೆಗಳ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಈ ಕೆರೆಗಳಿಂದ ಅಕ್ಕಪಕ್ಕದ ಗ್ರಾಮಗಳಾದ ಯಶವಂತಪುರ, ಅಳಲಹಳ್ಳಿ, ಎತ್ತಿಗೆ, ಚನ್ನಗುಂಡಿ, ಬಂಕಹಳ್ಳಿ, ಜನ ಜಾನುವಾರುಗಳಿಗೆ, ರೈತರುಗಳಿಗೆ ಅನುಕೂಲವಾಗಲಿದ್ದು ನಮ್ಮ ಪ್ರಯತ್ನಕ್ಕೆ ಫಲ ದೊರೆತಂತಾಗಿದೆ. ತುಂಬಾ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಳಲಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್, ಸಣ್ಣ ಏತ ನೀರಾವರಿ ಇಲಾಖೆಯ ಇಂಜಿನಿಯರ್ ಸೋಮಣ್ಣ, ಗ್ರಾಮದ ಮುಖಂಡರಾದ ಕೂಸಪ್ಪ, ವೆಂಕಟೇಶ್, ನಿಸಾರ್ ಅಹಮದ್, ಪ್ರಭಾಕರ್, ಸುರೇಶ್, ವಿಜಯ್, ರವಿ, ಇಂದ್ರಕುಮಾರ್ ಮತ್ತಿತರರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy