ಗ್ರಾಹಕರು ಖಾದಿ ಅಂಗಡಿಯಲ್ಲಿ ರಾಷ್ಟ್ರಧ್ವಜ ಕೊಳ್ಳುವುದರ ಜೊತೆ ಜೊತೆಗೆ ತಮ್ಮ ದಿನನಿತ್ಯ ಬಳಕೆಗೂ ಸಹ ಖಾದಿ ವಸ್ತ್ರಗಳನ್ನ ಬಳಕೆ ಮಾಡುವುದನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ರಾಷ್ಟ್ರಪ್ರೇಮವನ್ನ, ಗ್ರಾಮೀಣ ಜನರಿಗೆ ತೋರುವ ಸಹಕಾರವನ್ನ, ತಮ್ಮ ಮೈಮೇಲೆ ಧರಿಸಿ, ಗ್ರಾಮೀಣ ಉದ್ಯೋಗಸ್ಥರಿಗೆ ನಮ್ಮ ಸಹಕಾರದ ಹಸ್ತವನ್ನ ಚಾಚಿದಂತಾಗುತ್ತದೆ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.
ನಗರದಲ್ಲಿರುವ ಪ್ರತಿಯೊಂದು ಖಾದಿ ಅಂಗಡಿಯಲ್ಲೂ ಸಹ ಚರಕವನ್ನ ಪ್ರದರ್ಶನಕ್ಕೆ ಇಟ್ಟು, ದಾರ ತಯಾರಿಸುವುದನ್ನು ಜನರಿಗೆ ತೋರಿಸಿಕೊಟ್ಟರೆ, ಖಾದಿ ಬಗ್ಗೆ ಅಭಿಮಾನ ಹೆಚ್ಚಾಗಿ, ಇನ್ನು ಹೆಚ್ಚಾಗಿ ಖಾದಿಯನ್ನ ಬಳಕೆ ಮಾಡಲು ಪ್ರಾರಂಭಿಸುತ್ತಾರೆ. ಆದ್ದರಿಂದ ಪ್ರತಿ ಖಾದಿ ಅಂಗಡಿಯಲ್ಲೂ ಸಹ ಚರಕವನ್ನು ಇಟ್ಟು, ಅವುಗಳ ಪ್ರದರ್ಶನ ಮತ್ತು ಬಳಕೆಯನ್ನ ಜನಸಾಮಾನ್ಯರಿಗೆ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಲ್ಲಿ ಮಾತ್ರ ಜನರು ಬಾವುಟ ಖರೀದಿಗೆ ಖಾದಿ ಅಂಗಡಿಗೆ ಬರುವುದು ಸಾಮಾನ್ಯ, ಆದರೆ ಇನ್ನುಳಿದ ದಿನಗಳಲ್ಲಿ ಖಾಲಿ ಅಂಗಡಿ ಒಳಗೆ ಬರದೆ, ಆ ವಸ್ತ್ರಗಳನ್ನು ಬಳಕೆ ಮಾಡದೆ, ರಾಸಾಯನಿಕಗಳಿಂದ ತಯಾರದಂತ, ಕೈಗಾರಿಕೆಗಳಿಂದ ತಯಾರು ಆದಂತ ಬಟ್ಟೆಯನ್ನು ಬಳಸುತ್ತಿರುವುದರಿಂದ, ಇನ್ನೂ ಸಹ ಖಾದಿ ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಆಗದೆ ಹಿಂದುಳಿದಿದೆ. ಹಾಗಾಗಿ ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಗಳು, ಧರ್ಮ ಪ್ರಚಾರಕರು, ತಮ್ಮ ಕಾರ್ಯಕ್ರಮಗಳಲ್ಲಿ ಜನರಿಗೆ ಹೆಚ್ಚಿನ ಮಟ್ಟದ ಖಾದಿಯನ್ನು ಕೊಂಡು ಬಳಕೆ ಮಾಡಲು ತಿಳಿಸಿ, ಜನಸಾಮಾನ್ಯರಿಗೆ ದುಡಿಯುವ ಅವಕಾಶ ಕಲ್ಪಿಸಿಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.
ಬಹಳಷ್ಟು ಖಾದಿ ಅಂಗಡಿಗಳಲ್ಲಿ ಚರಕವನ್ನ ಮೊದಲು ಪ್ರದರ್ಶನ ಮಾಡುತ್ತಿದ್ದರು, ಈಗೀಗ ಚರಕೆಗಳನ್ನು ಸಹ ತೆಗೆದು ಮೂಲೆಗುಂಪು ಮಾಡಿರುವುದರಿಂದ, ಜನರಿಗೆ ಚರಕದ ಮಹತ್ವ ಅರಿವಾಗುತ್ತಿಲ್ಲ, ಅಂಗಡಿ ಮುಂದೆ ಹಾಕುವ ಪೋಸ್ಟರ್ಗಳಲ್ಲಿ, ಫ್ಲೆಕ್ಸ್ ಗಳಲ್ಲಿ ಚರಕದ ಚಿತ್ರವಿರುತ್ತದೆ, ಕಾರ್ಯ ಮಾಡುವಂತಹ ಚರಕವನ್ನ ಪ್ರದರ್ಶನ ಕೊಡಬೇಕಾಗಿದೆ. ಬರೀ ಚಿತ್ರದಲ್ಲಿ ತೋರಿಸುವ ಚರಕದಿಂದ ಜನರ ಮನಸ್ಸಿಗೆ ಅದರ ಶಕ್ತಿಯ ಅರಿವಾಗುವುದಿಲ್ಲ, ಹಾಗಾಗಿ ಪ್ರತಿ ಖಾದಿ ಅಂಗಡಿಯ ಸಂಸ್ಥೆಗಳು, ಅಂಗಡಿಗಳಲ್ಲಿ ಚರಕವನ್ನ ಪ್ರದರ್ಶನಕ್ಕೆ ಇಟ್ಟು, ಅದರಿಂದ ದಾರ ತೆಗೆಯುವುದನ್ನು ಸಹ ಗಿರಾಕಿಗಳಿಗೆ ತೋರಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ರಾಷ್ಟ್ರ ಧ್ವಜವನ್ನೇ ನಾವು ಕೈಯಿಂದ ತಯಾರಿಸಿ ಬಳಕೆ ಮಾಡುವುದರಿಂದ ಗ್ರಾಮೀಣ ಹುದ್ದೆಗಳು ಉಳಿದುಕೊಳ್ಳುತ್ತದೆ ಎಂದು ಗಾಂಧೀಜಿಯವರು ಖಾದಿ ಧ್ವಜಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು, ಅದೇ ಸಿದ್ಧಾಂತವನ್ನು ಹೀಗೂ ಸಹ ನಾವು ಅಳವಡಿಸಿಕೊಂಡು, ಬರಿ ರಾಷ್ಟ್ರಧ್ವಜ ಖರೀದಿಗೆ ಅಷ್ಟೇ ನಾವು ಖಾದಿ ಅಂಗಡಿಗೆ ಹೋಗದೆ, ಪ್ರತಿ ಸಂದರ್ಭದಲ್ಲಿ ಮನೆ ಗೃಹಪ್ರವೇಶಕ್ಕೆ, ಯಾರಿಗಾದರೂ ಉಡುಗೊರೆಯನ್ನು ಕೊಡಬೇಕಾದರೆ, ಮಕ್ಕಳ ಹುಟ್ಟು ಹಬ್ಬಕ್ಕೆ, ಖಾದಿ ಬಟ್ಟೆಗಳನ್ನೇ ಬಳಕೆ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
ಕಾಲೇಜುಗಳಲ್ಲಿ ಯತ್ನಿಕ್ ಡೇ ಎಂದು ಆಚರಣೆ ಮಾಡುವ ವಿದ್ಯಾರ್ಥಿಗಳು ಯುವಜನಾಂಗ, ಜೀನ್ಸ್ ಪ್ಯಾಂಟ್ ಅನ್ನು, ಪಂಚೆ ಉಟ್ಟುಕೊಂಡು ಬರುವುದನ್ನು ಹಾಗೂ ವೈವಿಧ್ಯಮಯವಾದ ಹುಡುಗೆಗಳನ್ನ ತೊಟ್ಟು ಬರುವುದು ಸಾಮಾನ್ಯವಾಗಿದೆ.. ಅಂತಹ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಒಂದು ದಿವಸದ ಮಟ್ಟಿಗೆ ಖಾದಿ ದಿವಸ ಎಂದು ಆಚರಿಸುವುದನ್ನು ತಿಳಿಸಿಕೊಡಬೇಕು. ಇದರಿಂದ ರಾಷ್ಟ್ರಪ್ರೇಮದ ಜಾಗೃತಿ ಉಂಟಾಗುತ್ತದೆ. ತಿರಂಗ ಕಾರ್ಯಕ್ರಮದಡಿಯಲ್ಲಿ ಪ್ರಧಾನ ಮಂತ್ರಿಗಳು ಹೆಚ್ಚಿನ ಖಾದಿಗೆ ಒತ್ತು ಕೊಟ್ಟಿರುವುದರಿಂದ, ನಾವು ಈ ಸ್ವಾತಂತ್ರ್ಯ ದಿನಾಚರಣೆಯ ನಂತರ ಪ್ರತಿ ಮನೆಯಲ್ಲೂ ಸಹ ಖಾದಿ ಮತ್ತು ಚರಕ ಎಂಬ ಸಂದೇಶವನ್ನು ಸಾರಲು ಅವಕಾಶ ದೊರೆಯುತ್ತದೆ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q