ಬೆಂಗಳೂರು: ಎಣ್ಣೆ ಪಾರ್ಟಿ ವೇಳೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳದ ಸೊನ್ನೇನಹಳ್ಳಿ ಬಳಿ ನಡೆದಿದೆ.
ಹೈನುಗಾರಿಕೆ ಮಾಡುತ್ತಿದ್ದ ಮೂರ್ತಿ(52) ಕೊಲೆಯಾದ ವ್ಯಕ್ತಿ. ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಕೀರ್ತಿ(26) ಹತ್ಯೆ ಆರೋಪಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಸೊನ್ನೇನಹಳ್ಳಿಯ ಕನಕಭವನ ಸಮೀಪ ಮೃತ ಮೂರ್ತಿ ಅವರ ಸೋದರ ಶ್ರೀನಿವಾಸ್ ಅವರ ಮನೆಯಿದೆ. ಪಿತೃಪಕ್ಷ ನಿಮಿತ್ತ ಸಹೋದರನ ಮನೆಗೆ ಮೂರ್ತಿ ಹೋಗಿದ್ದರು..ಸಹೋದರನ ಮನೆ ಪಕ್ಕದಲ್ಲಿಯೇ ಪಾಳು ಬಿದ್ದ ಮನೆ ಹಾಗೂ ಖಾಲಿ ಜಾಗವಿದ್ದು ಅಲ್ಲಿ ಟೈಮ್ ಪಾಸ್ ಗಾಗಿ ಆಗಾಗ್ಗೆ ಸೇರಿಕೊಂಡು ಎಣ್ಣೆ ಪಾರ್ಟಿ ಸೇರಿದಂತೆ ಮೋಜು–ಮಸ್ತಿ ಮಾಡಲಾಗುತ್ತಿತ್ತು. ಇದರಲ್ಲಿ ಸ್ಥಳೀಯ ಕೆಲವರು ಕೂಡ ಸೇರಿಕೊಳ್ಳುತ್ತಿದ್ದರು.
ನಿನ್ನೆ ಮೂರ್ತಿ ಅವರು ಸಹೋದರನ ಮನೆಗೆ ಹೋಗಿದ್ದಾಗ ರಾತ್ರಿ 12 ಗಂಟೆ ಸಂದರ್ಭದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಸ್ಥಳೀಯರೊಂದಿಗೆ ಈ ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದು, ಈ ವೇಳೆ ನನ್ನ ಲೋಟದಲ್ಲಿದ್ದ ಎಣ್ಣೆ ಚೆಲ್ಲಿದೆ ಎಂದು ಮೂರ್ತಿ ಮತ್ತು ಕೀರ್ತಿ ನಡುವೆ ಗಲಾಟೆಯಾಗಿದೆ. ಇದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಕೀರ್ತಿ ಚಾಕುವಿನಿಂದ ಮೂರ್ತಿ ಹೊಟ್ಟೆಗೆ ಇರಿದಿದ್ದಾನೆ. ಕುಸಿದು ಬಿದ್ದ ಮೂರ್ತಿಯನ್ನು ಅಲ್ಲಿದ್ದವರೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಗಂಭೀರಗಾಯವಾಗಿದ್ದು, ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿಯೇ ಮೂರ್ತಿ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296