ಭಾರತದ ಧ್ವಜ ಸಂಹಿತೆ 2002ರ ನಿಯಮದ ಪ್ರಕಾರ ಧ್ವಜವನ್ನು ಆಚರಿಸಲು ಅದರದ್ದೇ ಆದ ನಿಯಮಗಳಿದ್ದು, ಭಾರತೀಯ ನಾಗರಿಕರಾದ ನಾವು ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಜೈಲೂಟ ಗ್ಯಾರಂಟಿ.
ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳು:
ಧ್ವಜ ಸಂಹಿತೆ 2002ರ ಪ್ರಕಾರ, ತ್ರಿವರ್ಣ ಧ್ವಜ 3:2 ಅನುಪಾತದಲ್ಲಿ ಇರಬೇಕು. ತಿರಂಗಾವನ್ನು ತಲೆಕೆಳಗಾಗಿ ಪ್ರದರ್ಶಿಸಬಾರದು. ಕೇಸರಿ ಬಣ್ಣವು ಮೇಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೇಲೆ ಕೇಸರಿ, ಮಧ್ಯ ಬಳಿ, ಕೆಳಗೆ ಹಸಿರು ಬಣ್ಣ ಇರಬೇಕು.
ಧ್ವಜವು ಗೌರವ ಸ್ಥಾನದಲ್ಲಿರಬೇಕು. ಧ್ವಜ ಹರಿದಿರಬಾರದು ಹಾಗೂ ಕೊಳಕು ಆಗಿರಬಾರದು. ಅದರ ಮೇಲೆ ಏನೂ ಬರೆಯಬಾರದು ಅಥವಾ ಮುದ್ರಿಸಬಾರದು. ಬೇರೆ ಯಾವುದೇ ಧ್ವಜವನ್ನೂ ತ್ರಿವರ್ಣ ಧ್ವಜಕ್ಕೆ ಸಮನಾಗಿ ಮತ್ತು ಎತ್ತರದಲ್ಲಿ ಹಾರಿಸಬಾರದು.
ಬಾವುಟದ ಮಧ್ಯಭಾಗದಲ್ಲಿ 24 ಗೆರೆಗಳ ಅಶೋಕ ಚಕ್ರ ಹೊಂದಿರಬೇಕು. ಅದು ಕಡು ನೀಲಿಯದ್ದಾಗಿರಬೇಕು. ಒಂದು ವೇಳೆ ಮನೆಯಲ್ಲಿ ಧ್ವಜ ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರಿಗೆ ತಾಗದಂತೆ ನೋಡಿಕೊಳ್ಳಬೇಕು.
ತ್ರಿವರ್ಣ ಧ್ವಜವನ್ನು ಲಂಬವಾಗಿ ಪ್ರದರ್ಶಿಸಿದಾಗ ಕೇಸರಿ ಬಣ್ಣದ ಪಟ್ಟಿಯು ಬಲಭಾಗದಲ್ಲಿ ಇರಬೇಕು. ಹೂವುಗಳು, ಹೂಮಾಲೆಗಳು ಅಥವಾ ಲಾಂಛನಗಳು ಯಾವುದೂ ರಾಷ್ಟ್ರಧ್ವಜದಲ್ಲಿ ಇರಬಾರದು. ತ್ರಿವರ್ಣ ಧ್ವಜವನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಬಳಸಬಾರದು.
ಭಾರತದ ಧ್ವಜ ಸಂಹಿತೆಯ ಭಾಗ 3ರ ವಿಭಾಗ 9ರಲ್ಲಿನ ನಿಬಂಧನೆಗಳ ಪ್ರಕಾರ, ವಾಹನದ ಬಾನೇಟಿನ ಮೇಲೆ ಧ್ವಜವನ್ನು ಹಾರಿಸಬೇಕು. ವಾಹನಗಳ ಬದಿ, ಹಿಂಭಾಗ, ಮೇಲ್ಭಾಗ ಮುಚ್ಚಲು ಬಳಸಬಾರದು. ಪ್ಲಾಸ್ಟಿಕನಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಬಳಸಬೇಡಿ.
ನಾವು ಧ್ವಜಾರೋಹಣದ ವೇಳೆ ಎಷ್ಟು ಗೌರವ ನೀಡುತ್ತೇವೆಯೋ ಅದೇ ರೀತಿ ಇಳಿಸುವಾಗಲೂ ಅಷ್ಟೇ ಗೌರವ ನೀಡಬೇಕು. ಧ್ವಜ ತೆಗೆದ ನಂತರ ಮಡಚಲು ಅದರದ್ದೇ ನಿಯಮಗಳಿವೆ. ಇಬ್ಬರು ಧ್ವಜ ಮಡಚಬೇಕು. ಬಾವುಟದಲ್ಲಿ ಹಸಿರು ಬಣ್ಣವನ್ನು ಮೊದಲು ಮಡಚಬೇಕು.
ನಂತರ ಹಸಿರು ಬಣ್ಣದ ಪಟ್ಟಿ ಮೇಲೆ ಕೇಸರಿ ಬಣ್ಣದ ಪಟ್ಟಿ ಮುಚ್ಚಬೇಕು. ಹೀಗೆ ಮಡಚಿದ ನಂತರ ಅಶೋಕ ಚಕ್ರ ಮೇಲ್ಭಾಗದಲ್ಲಿ ಕಾಣಿಸಬೇಕು. ನಂತರ ಅದನ್ನು ಸುರಕ್ಷಿತ ಸ್ಥಳದಲ್ಲಿಡಬೇಕು. ಒಂದು ವೇಳೆ ಧ್ವಜ ಹಾನಿಯಾದರೆ ಎಲ್ಲೆಂದರಲ್ಲಿ ಬಿಸಾಡಬಾರದು.
ತ್ರಿವರ್ಣಧ್ವಜ ಹಾನಿಯಾಗಿದ್ದರೆ ಕಸದ ಬುಟ್ಟಿ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಎಸೆಯಬಾರದು. ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಅದರ ಬೂದಿಯನ್ನು ನದಿ ನೀರಿನಲ್ಲಿ ಬಿಟ್ಟುಬರಬೇಕು.
ಭಾರತದ ಧ್ವಜ ಸಂಹಿತೆ-2002, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆ-1971ಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಷ್ಟ್ರ ಧ್ವಜಕ್ಕೆ ಅವಮಾನಿಸಿದ್ದು, ಅಗೌರವಿಸಿದ್ದು, ದುರುಪಯೋಗ ಮಾಡಿಕೊಂಡರೆ ಮೂರು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.
ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿ ಕಠಿಣ ಕಾನೂನು ನಿಯಮಗಳಿವೆ. ರಾಷ್ಟ್ರ ಗೀತೆ ಮತ್ತು ತ್ರಿವರ್ಣ ಧ್ವಜವನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದು ಪಾಲನೆಯಾಗದಿದ್ದರೆ ಶಿಕ್ಷಾರ್ಹ ಅಪರಾಧ. ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ನಿರ್ಮಿತ ರಾಷ್ಟ್ರಧ್ವಜ ಬಳಕೆಗೆ ಅವಕಾಶವಿರಲಿಲ್ಲ.
ಭಾರತದ ಧ್ವಜವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ಹಾರಿಸಬಹುದು. ತ್ರಿವರ್ಣ ಧ್ವಜದ ಸಮವಸ್ತ್ರ ಧರಿಸಬಾರದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


