ಬೆಂಗಳೂರು: ನಾಡಹಬ್ಬಕ್ಕೆ ಕಳಂಕ ತರುವ ರೀತಿಯಲ್ಲಿ ಈ ಸರಕಾರದ ಹಗರಣಗಳು, ಭ್ರಷ್ಟಾಚಾರದ ಅಸ್ಥಿಪಂಜರಗಳು ಪ್ರತಿನಿತ್ಯ ಹೊರಕ್ಕೆ ಬರುತ್ತಿವೆ. ದಸರಾ ಉತ್ಸವದಲ್ಲಿ ಖ್ಯಾತ ಸರೋದ್ ವಾದಕ, ಪದ್ಮಶ್ರೀ ಪುರಸ್ಕøತ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ಆಯೋಜಿಸಲು 5 ಲಕ್ಷ ಕಾರ್ಯಕ್ರಮದ ಆಯೋಜನೆಗೆ 3 ಲಕ್ಷ ಲಂಚ ಎಂದಾದರೆ, ಶೇ 60 ಲಂಚ ಕೇಳಿದಂತಾಗಿದೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿರಿಯ ಸಂಸ್ಕತಿ ಪುತ್ರನ ಬಳಿ ಶೇ 60 ಲಂಚ ಕೇಳುವುದಾದರೆ ನಾಡಹಬ್ಬಕ್ಕೆ ಇದಕ್ಕಿಂತ ಕಳಂಕ ಬೇರೊಂದಿಲ್ಲ. ಇಷ್ಟು ಮಾತ್ರವಲ್ಲ; ಈ ಸರಕಾರದಡಿ ಕಲಾವಿದರನ್ನೂ ಬಿಡುತ್ತಿಲ್ಲ; ಇನ್ನು ಬೇರೆಯವರನ್ನು ಬಿಡುವರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದ ಕಮಿಷನ್ ದಂಧೆ ಕೇವಲ ಗುತ್ತಿಗೆದಾರರಿಗೆ, ಸರಕಾರಿ ಯೋಜನೆಗಳಿಗೆ ಸೀಮಿತವಾಗಿಲ್ಲ. ಅದು ಕಲಾವಿದರ ಗೌರವಧನದ ವರೆಗೂ ಕೈಚಾಚಿಬಿಟ್ಟಿದೆ. ಇದು ದುರಂತದ ಸಂಗತಿ ಮಾತ್ರವಲ್ಲ; ಸಾಂಸ್ಕøತಿಕ ಅಧಃಪತನದತ್ತ ಇವರು ರಾಜ್ಯವನ್ನು ಒಯ್ಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮಾನ್ಯ ಮುಖ್ಯಮಂತ್ರಿಗಳು ನಮ್ಮದು ಭ್ರಷ್ಟಾಚಾರರಹಿತ ಆಡಳಿತ ಎನ್ನುತ್ತಾರೆ. ಅಬ್ಬರಿಸಿ ಬೊಬ್ಬಿರಿವ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಅವರ ಮೂಗಿನ ಕೆಳಗೇ ಇದು ನಡೆದಿದೆ. ಬೇರೆ ಜಿಲ್ಲೆಗಳಲ್ಲಿ ಇನ್ನು ಪರಿಸ್ಥಿತಿ ಹೇಗಿರಬಹುದು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಒತ್ತಡದ ಮೂಲಕ ಪ್ರಕರಣ ಮುಚ್ಚಿಹಾಕಲು ಮುಂದಾದುದು ಇನ್ನಷ್ಟು ನಾಚಿಕೆಗೇಡಿನ ಸಂಗತಿ ಎಂದರು.
ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ. ಹಿಂದೆ ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರು. ಈಗ ಗುತ್ತಿಗೆದಾರ ಅಂಬಿಕಾಪತಿ ಕರೋಡ್‍ಪತಿಯಾಗಿದ್ದಾರೆ. ಅವರ ಮನೆಯಲ್ಲಿ 42 ಕೋಟಿ, ಇನ್ನೊಬ್ಬ ಬಿಲ್ಡರ್ ಕೇತಮಾರನಹಳ್ಳಿ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ 40 ಕೋಟಿ- ಹೀಗೆ ಕೋಟಿ ಕೋಟಿ ಹೊರಕ್ಕೆ ಬರುತ್ತಿದೆ. ಇವರಿಬ್ಬರೂ ರಾಜ್ಯದ ನಂಬರ್ 1, ನಂಬರ್ 2 ಅವರ ಬೇನಾಮಿಗಳು ಎಂಬ ಮಾಹಿತಿ ನಮಗಿದೆ ಎಂದು ವಿವರ ನೀಡಿದರು. ಇದರ ಸಿಬಿಐ ತನಿಖೆ ಮಾಡಿ ಎಂದು ಆಗ್ರಹಿಸಿದರು.
ನಂಬರ್ 1, ನಂಬರ್ 2 ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನೂರಾರು ಬೇನಾಮಿಗಳನ್ನು ನೇಮಿಸಿದ್ದಾರೆ. ಇಬ್ಬರು ಬೇನಾಮಿಗಳು ಮಾತ್ರ ಸಿಕ್ಕಿದ್ದಾರೆ. ಈ ಹಣವೇ ಬೇನಾಮಿಗಳ ನೇಮಕಕ್ಕೆ ಸಾಕ್ಷಿ. ಕರ್ನಾಟಕವನ್ನು ಇವರು ಎಟಿಎಂ ಮಾಡಿಕೊಂಡಿದ್ದಾರೆ. ಹಿಂದೆ ಗೋವಿಂದರಾಜು ಅವರ ಡೈರಿ ಇದಕ್ಕೆ ಸಾಕ್ಷಿ ಆಗಿತ್ತು. ಆರ್‍ಜಿ ಯಾರು, ಎಸ್‍ಜಿ ಯಾರು, ಎಷ್ಟೆಷ್ಟು ಕೊಟ್ಟಿದ್ದಾಗಿ ಡೈರಿ ಸಾಕ್ಷಿ ಕೊಟ್ಟಿತ್ತು ಎಂದು ಅವರು ತಿಳಿಸಿದರು.


