ಕುಣಿಗಲ್: ಪಟ್ಟಣದ ಕುಂಬಾರಗುಂಡಿ ಸ್ಮಶಾನದಲ್ಲಿ ವರ್ಷದ ಹಿಂದೆ ವಿದ್ಯುತ್ ಚಿತಾಗಾರ ಉದ್ಘಾಟನೆಗೊಂಡಿತ್ತು. ಆದ್ರೆ, ಇದು ಉದ್ಘಾಟನೆಗಿಂತ ಮೊದಲೇ ಶಿಥಿಲಾವಸ್ಥೆ ತಲುಪಿದ್ದು, ಕಾರ್ಯಾರಂಭಗೊಳ್ಳುವ ಮುನ್ನವೇ ಚಿತಾಗಾರ ಶಿಥಿಲಾವಸ್ಥೆಗೆ ತಲುಪಿರುವುದಕ್ಕೆ ಯಾರು ಹೊಣೆ ಅನ್ನೋ ಪ್ರಶ್ನೆ ಕೇಳಿ ಬಂದಿದೆ.
ವರದಿಗಳ ಪ್ರಕಾರ, ಸಂಸದ ಡಿ.ಕೆ. ಸುರೇಶ್ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣವಾಗಿತ್ತು. ಆದರೆ ಎರಡು ವರ್ಷ ಕಳೆದಿದ್ದರೂ, ಯಂತ್ರೋಪಕರಣ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಸಾಧ್ಯವಾಗಿರಲಿಲ್ಲ, ಕಳೆದ ವರ್ಷ ಶಾಸಕ ಡಾ.ರಂಗನಾಥ್ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಆದರೆ, ನಿರ್ವಹಣೆ ಕೊರತೆಯಿಂದಾಗಿ ಚಿತಾಗಾರ ಕಾರ್ಯಾರಂಭ ತಡವಾಗಿದ್ದು, ಪುರಸಭೆಯಿಂದ ನಿರ್ವಹಣೆ ಟೆಂಡ ಕರೆಯಲಾಗಿದ್ದು, ಗುತ್ತಿಗೆ ಪಡೆದವರು ಅರ್ಹ ಸಿಬ್ಬಂದಿಗೆ ತರಬೇತಿ ನೀಡಿ ಕಾರ್ಯಾರಂಭ ಮಾಡದ ಕಾರಣ ಮತ್ತೆ ಸ್ಥಗಿತಗೊಂಡಿದೆ.
ಈಗಾಗಲೇ ಎರಡು ಬಾರಿ ಚಿತಾಗಾರದ ಬಾಗಿಲು ಮೀಟಿ ಒಳ ನುಸುಳಿದ ಕಿಡಿಗೇಡಿಗಳು ಸಾಮಗ್ರಿ ಕಳವು ಮಾಡಿದ್ದಾರೆ. ಕಿಟಕಿ ಗಾಜುಗಳನ್ನು ನಿರಂತರವಾಗಿ ಒಡೆದು ಹಾಕಲಾಗುತ್ತಿದ್ದು, ಪುರಸಭೆಯಿಂದ ಅಳವಡಿಕೆ ಕಾರ್ಯ ಮುಂದುವರೆದಿದೆ.
ಕುಲುಮೆ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ನೀಡಿದ ನಂತರ ಪ್ರಾಯೋಗಿಕವಾಗಿ ಕೆಲ ಪ್ರಾಣಿಗಳ ಕಳೇಬರ ದಹಿಸಿ ಯಶಸ್ವಿಯಾಗಿದ್ದಾರೆಯೇ ಹೊರತು, ಜನರಲ್ಲಿ ಜಾಗೃತಿ ಮೂಡಿಸಿ ವಿದ್ಯುತ್ ಚಿತಾಗಾರ ಬಳಕೆಗೆ ಪ್ರಯತ್ನ ಮಾಡುತ್ತಿಲ್ಲ. ಶವಗಳ ಅಂತ್ಯಕ್ರಿಯೆಗೆ ತರುವ ಸಮಯದಲ್ಲಿ ಪುರಸಭೆ ಅವರನ್ನು ಸಂಪರ್ಕಿಸಿದಾಗ ವಿದ್ಯುತ್ ಚಿತಾಗಾರ ಇನ್ನೂ ಕಾರ್ಯಾರಂಭ ಮಾಡುತ್ತಿಲ್ಲ ಎನ್ನುವ ಉತ್ತರ ಅಧಿಕಾರಿಗಳಿಂದ ಬರುತ್ತಿದೆಯಂತೆ!
ಒಟ್ಟಿನಲ್ಲಿ ಸರ್ಕಾರದ ಅನುದಾನದಲ್ಲಿ ಚಿತಾಗಾರ ನಿರ್ಮಿಸಿ ಅದನ್ನು ಸದ್ಬಳಕೆ ಮಾಡಿಕೊಳ್ಳದೇ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳನ್ನ ಸಾರ್ವಜನಿಕರು ಕೇಳುತ್ತಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಈ ಬಗ್ಗೆ ಕ್ರಮವಹಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


