ತುಮಕೂರು: ನಗರದ ಅನನ್ಯ ಪಿಯು ಕಾಲೇಜಿನಲ್ಲಿ ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕುವೆಂಪು ದಿನಾಚರಣೆ ಅಂಗವಾಗಿ ‘ವಿದ್ಯಾರ್ಥಿಗಳೆಡೆ ಕುವೆಂಪು ಭಾವಗೀತೆಗಳ ನಡೆ’ ಎಂಬ 3 ದಿನಗಳ ಭಾವಗೀತೆಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಹಾಗೂ ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಕೆರೆ, ರಾಷ್ಟ್ರಕವಿ ಕುವೆಂಪುರವರ ಭಾವಗೀತೆಗಳಲ್ಲಿ ಪ್ರಕೃತಿ ಪ್ರೀತಿ, ಮಾನವತಾವಾದ, ಭಾವಗೀತೆಗಳಲ್ಲಿ ಕಾಣುವ ಭಾಷಾ ಸೌಂದರ್ಯ, ರಸವತ್ತಾದ ಪ್ರಕೃತಿ ವರ್ಣನೆ ಮಾನವನ ಜೀವನ ತತ್ವಗಳ ದರ್ಶನವನ್ನು ಕಾಣಬಹುದಾಗಿದೆ ಎಂದರು.
‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಅವರ ಮಾತುಗಳು ಅವರ ಪ್ರತಿ ಗೀತೆಗಳಲ್ಲಿ ಕಾಣಬಹುದಾಗಿದೆ. ‘ಓ ನನ್ನ ಚೇತನ’, ‘ನೂರು ದೇವರನೆಲ್ಲ ನೂಕಾಚೆ ದೂರ’, ‘ಆನಂದಮಯ ಈ ಜಗ ಹೃದಯ’, ‘ಬಾರಿಸು ಕನ್ನಡ ಡಿಂಡಿಮವ’, ‘ಕನ್ನಡ ಎನೆ ಕುಣಿದಾಡುವುದೆನ್ನೆದೆ’, ‘ಭಾಗ್ಯ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ’ ಹೀಗೆ ಒಂದೊಂದು ಗೀತೆಗಳು ಮಾನವನ ಹೃದಯಕ್ಕೆ ಹತ್ತಿರವಾಗಿವೆ. ಇಂತಹ ಸೃಹದಯ ಭಾವಗೀತೆ ಹಾಡುವುದನ್ನು ಕಲಿತು, ಕೇಳುಗರಿಗೆ ತಲುಪಿಸುವ ಕಾರ್ಯ ಇವತ್ತಿನ ಯುವ ಸಮೂಹ ಮಾಡಬೇಕಿದೆ ಎಂದು ಕೆಂಕೆರೆ ಮಲ್ಲಿಕಾರ್ಜುನ ನುಡಿದರು.
ಇಂದಿನ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು, ಅದರಲ್ಲೂ ಹದಿಹರೆಯದ ಯುವಜನರು ಮೊಬೈಲ್, ಸೋಶಿಯಲ್ ಮೀಡಿಯಾಗಳ ದಾಸರಾಗಿ, ಮನಸ್ಸಿಗೆ ಮುದ ನೀಡುವ ಗೀತೆಗಳನ್ನು ಕೇಳುವುದನ್ನು ಮರೆತಂತಿದೆ. ಇಂತಹ ಮಕ್ಕಳು ಸುಮಧುರ ಭಾವಗೀತೆಗಳ ಕಡೆಗೆ ವಾಲುವಂತೆ ಮಾಡುವ ಉದ್ದೇಶದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೆಡೆಗೆ ಕುವೆಂಪು ಭಾವಗೀತೆಗಳ ನಡೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಘು ಆರ್. ಮಾತನಾಡಿ, ಪಠ್ಯ ತರಗತಿಯ ನಡುವೆ ವಿಶೇಷ ಸಂದರ್ಭದಲ್ಲಿ ಸುಗಮ ಸಂಗೀತ, ಜಾನಪದ ಗಾಯನ, ಜಾನಪದ ಇತರೆ ಕಲೆಗಳ ತರಬೇತಿ ಕಮ್ಮಟಗಳನ್ನು ಆಯೋಜನೆ ಮಾಡಿದರೆ ವಿದ್ಯಾರ್ಥಿಗಳನ್ನು ಕಲೆಗಳ ಪರಿಚಯವಾಗಿ ಕಲೆಗಳತ್ತ ಆಕರ್ಷಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಗಾಯಕರಾದ ರವಿ ಕುಮಾರ್, ಕನ್ನಡ ಉಪನ್ಯಾಸಕ ಚಂದ್ರಶೇಖರ್, ಚೈತ್ರ ಅಭಯಕುಮಾರ್ ಉಪಸ್ಥಿತರಿದ್ದರು. ಗಾಯಕರಾದ ಕೆಂಕೆರೆ ಮಲ್ಲಿಕಾರ್ಜುನ, ರವಿಕುಮಾರ್, ಬಾಣಸಂದ್ರ ಶಶಿಕುಮಾರ್, ವೈ. ವೀರೇಂದ್ರ, ಶೈಲಜಾ, ಲೋಕೇಶ್ ಬಾಬು ನಿರಂಜನ್, ರಾಜೇಶ್ ಮುಂತಾದವರು 3 ದಿನಗಳ ಕಾಲ ನಡೆದ ಶಿಬಿರದಲ್ಲಿ ಆಸಕ್ತ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


