ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆಗೆ ಚುನಾವಣಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಹೆಬ್ಬಾಳ್ಕರ್ ತಮ್ಮ ಗೃಹ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರ ಸಭೆಯನ್ನು ನಡೆಸಿದ್ದು, ಇದೇ ವೇಳೆ ನಿವಾಸಕ್ಕೆ ಭೇಟಿ ನೀಡಿದ ಚುನಾವಣಾ ಅಧಿಕಾರಿಗಳು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಸಚಿವೆ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನೂ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಮೂಲಗಳ ಪ್ರಕಾರ ಕುವೆಂಪು ನಗರದಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿವಾಸದ ಪಕ್ಕದಲ್ಲಿ ವಿಶಾಲವಾದ ಗೃಹಕಚೇರಿಯಿದೆ. ಬೆಳಗ್ಗೆಯಿಂದ 500ಕ್ಕೂ ಹೆಚ್ಚು ಅಂಗನವಾಡಿ ಆಶಾಕಾರ್ಯಕರ್ತೆಯರು ಸೇರಿದ್ದು, ಈ ಬಗ್ಗೆ ಅಪರಿಚಿತರೊಬ್ಬರು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಚುನಾವಣಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕಾರ್ಯಕರ್ತೆಯರನ್ನು ಹೊರಗೆ ಕಳುಹಿಸಿ, ಹಲವರಿಂದ ಮಾಹಿತಿ ಸಂಗ್ರಹಿಸಿ ನಂತರ ಸಚಿವೆಯಿಂದ ವಿವರ ಪಡೆದಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾಂಗ್ರೆಸ್ನಿಂದ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿನ್ನೆಲೆ ಚುನಾವಣೆಯಲ್ಲಿ ತಮ್ಮ ಪುತ್ರನ ಪರವಾಗಿ ಮತ ಹಾಕಿಸುವಂತೆ ಕಾರ್ಯಕರ್ತೆಯರಿಗೆ ಒತ್ತಡ ಹೇರಲು ಕರೆಸಿಕೊಂಡಿದ್ದಾರೆ. ಇದು ಅಧಿಕಾರದ ದುರುಪಯೋಗ ಎಂದು ದೂರು ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


