ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷವಾಗಿ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ವಾರ್ಷಿಕ ಫಲಪುಷ್ಪ ಪ್ರದರ್ಶನದಲ್ಲಿ ದಿವಂಗತ ನಟ ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಲ್ಲರ ಪ್ರೀತಿಗೆ ಸದಾ ಚಿರಋಣಿ ಎಂದಿದ್ದಾರೆ.
ಸಣ್ಣ ವಿಡಿಯೋ ತುಣುಕಿನೊಂದಿಗೆ ಟ್ವೀಟ್ ಮಾಡಿರುವ ಡಾ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಕರ್ನಾಟಕ ಸರ್ಕಾರ, ಲಾಲ್‌ಬಾಗ್ ಅಧಿಕಾರಿಗಳು ಹಾಗೂ ಎಲ್ಲಾ ಅಭಿಮಾನಿ ದೇವರುಗಳು ಅಪ್ಪು ಅವರ ಮೇಲೆ ಇಟ್ಟಿರುವ ಅಪರಿಮಿತ ಪ್ರೀತಿಗೆ ನಾನು ಸದಾ ಚಿರಋಣಿ ಎಂದು ಬರೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕರೋನಾವೈರಸ್ ಕಾರಣದಿಂದಾಗಿ ಕಳೆಗುಂದಿದ್ದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು ಈ ವರ್ಷ ಆಗಸ್ಟ್ 5 ರಿಂದ 15 ರವರೆಗೆ ಆಯೋಜಿಸಲಾಗಿದೆ. ಈ ವರ್ಷ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನದಲ್ಲಿ ಡಾ ರಾಜ್‌ಕುಮಾರ್, ಅವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಪುತ್ರ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗಳು ಆಕರ್ಷಕ ಕೇಂದ್ರಬಿಂದುವಾಗಿದೆ.
ಲಾಲ್‌ಬಾಗ್ ನ ಫಲಪುಷ್ಪ ಪ್ರದರ್ಶನದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ 30 ಅಡಿ ಎತ್ತರದ ಪ್ರತಿಮೆ ಜೊತೆಗೆ ಡಾ ರಾಜ್‌ಕುಮಾರ್ ಅವರ ಒಂದು ಪ್ರಸಿದ್ಧ ಪಾತ್ರದ ಗೆಟ್-ಅಪ್ ಅನ್ನು ನಿರ್ಮಿಸಲಾಗಿದೆ. ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಹಾಗೂ ಡಾ.ಪುನೀತ್ ರಾಜ್‌ಕುಮಾರ್ ಸಂಸ್ಮರಣಾ ಫಲಪುಷ್ಪ ಪ್ರದರ್ಶನ ಎಲ್ಲರ ಗಮನಸೆಳೆಯುತ್ತಿದೆ. ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯು ಫಲಪುಷ್ಪ ಪ್ರದರ್ಶನವನ್ನು ಇನ್ನಷ್ಟು ಆಕರ್ಷಕವಾಗಿಸಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy