ಬರಿ ಹೊಟ್ಟೆ ಸತ್ಯಾಗ್ರಹ ಪ್ರತಿಭಟನಾ ಸಭೆಯು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜರುಗಿತು. ಜನದನಿ ಕಲಾ ತಂಡದಿಂದ ಹೋರಾಟದ ಹಾಡುಗಳನ್ನು ಹಾಡುವುದರ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಪತ್ರಕರ್ತರು, ಹೋರಾಟಗಾರರು ಆದ ಡಾ. ವಿಜಯಮ್ಮ ಅವರು ಎಚ್. ಎಸ್. ದೊರೆಸ್ವಾಮಿ ಅವರ ಫೋಟೋ ಮತ್ತು ಘೋಷಣೆಯನ್ನು ಅನಾವರಣ ಮಾಡಿ ಪ್ರತಿಜ್ಞಾವಿಧಿಯನ್ನು ಓದಿಸುವ ಮೂಲಕ ಉದ್ಘಾಟನೆ ಮಾಡಿದರು.
ಭೂಮಿ, ವಸತಿ ಹಕ್ಕು ವಂಚಿತರಿಗೆ ಭೂಮಿ ಮತ್ತು ನಿವೇಶನದ ಹಕ್ಕು ದೊರೆಯುವವರೆಗೂ ಹೋರಾಟ ನಿಲ್ಲುವುದಿಲ್ಲ. ಭೂಮಿ ವಂಚಿತರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಘನತೆಯ ಬದುಕನ್ನ ಕಟ್ಟಿಕೊಡಲು ಹೋರಾಟ ಮಾಡಿಸಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿ ಅವರ ಆಶಯಗಳನ್ನು ಈಡೇರಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಹಿರಿಯ ಸಾಹಿತಿ, ಹೋರಾಟಗಾರ್ತಿ ಡಾ. ವಿಜಯಮ್ಮ ಹೇಳಿದ್ದಾರೆ.
“ಸ್ವಾತಂತ್ರ್ಯ ಸೇನಾನಿ, ನಮ್ಮ ಹೋರಾಟದ ಪ್ರೇರಣೆಯೂ ಆದ ಹಿರಿಯ ದೊರೆಸ್ವಾಮಿ ಅವರು ಇಂದು ದೈಹಿಕವಾಗಿ ನಮ್ಮ ಜೊತೆಗಿಲ್ಲ. ಆದರೆ, ಚೈತನ್ಯವಾಗಿ ಈ ಹೋರಾಟದಲ್ಲಿ ನಮ್ಮ ಜೊತೆಯೇ ಇದ್ದಾರೆ. ಅವರು ಹಚ್ಚಿದ ಸ್ವಾಭಿಮಾನದ ದೀಪ ನಮ್ಮೊಳಗೆ ಜೀವಂತವಾಗಿದೆ. ಅವರು ಕಲಿಸಿದ ಬದ್ಧತೆ ಮತ್ತು ಪ್ರಾಮಾಣಿಕತೆ ಈ ಚಳವಳಿಯ ಜೀವಾಳವಾಗಿದೆ” ಎಂದು ಹೇಳಿದರು.
“ದೊರೆಸ್ವಾಮಿ ಅವರುಹೇಳಿದ ‘ಅಂತ್ಯೋದಯ’ದ ಕನಸು ಈ ಹೋರಾಟದ ಧೈಯವಾಗಿದೆ. ಅವರು ತೋರಿದ ‘ಸತ್ಯಾಗ್ರಹದ ‘ ಮಾದರಿ ಈ ಹೋರಾಟದ ಹಾದಿಯಾಗಿದೆ. ಬಡವರ ದನಿಯನ್ನು ಸಾವಧಾನವಾಗಿ ಕೇಳಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಿಂತು ಹೋದ ಬಡವರ ಕೆಲಸಕ್ಕೆ ಮರು ಚಾಲನೆ ನೀಡಿ ಎಂದು ಸರ್ಕಾರಕ್ಕೆ ಕೋರುತ್ತಿದ್ದೇವೆ” ಎಂದರು.
“ಸರ್ಕಾರ ನಮ್ಮ ಕೋರಿಕೆಯನ್ನು ಗಂಭೀರತೆ ಜೊತೆ ಗಮನಕ್ಕೆ ತೆಗೆದುಕೊಂಡು ಸೂಕ್ತ ರೀತಿಯ ಸಭೆಯನ್ನು ಕರೆಯುವ ತನಕ ಈ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ. ನಾವು ದುಡುಕುವುದಿಲ್ಲ. ಹಾಗೆಂದು ಉದ್ದೇಶ ಈಡೇರದೆ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ದೊರೆಸ್ವಾಮಿ ಅವರ ನೆನಪಿನಲ್ಲಿ ಪ್ರಮಾಣ ವಿಧಿ ಸ್ವೀಕರಿಸುತ್ತಿದ್ದೇವೆ” ಎಂದು ಹೇಳಿದರು.
ನಂತರ, ರೈತ ಸಂಘದ ಮುಖಂಡರಾದ ವೀರಸಂಗಯ್ಯ, ಭೂಮಿ ವಸತಿ ಸಮಿತಿಯ ರಾಜ್ಯ ಮುಖಂಡರಾದ ಡಿ.ಎಚ್. ಪೂಜಾರ್ ಮತ್ತು ನಿರ್ವಾಣಪ್ಪ ಅವರು ಹುತಾತ್ಮ ಎಚ್. ಎಸ್. ದೊರೆಸ್ವಾಮಿ, ಕಾಂ. ಗದ್ದರ್ ಮತ್ತು ಎ.ಕೆ. ಸುಬ್ಬಯ್ಯ ಅವರ ಕುರಿತು ಮಾತನಾಡಿ ಶ್ರದ್ದಾಂಜಲಿ ನಡೆಸಿಕೊಟ್ಟರು.
ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ಕುಮಾರ್ ಸಮತಳ ಅವರು ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ಬಡವರು, ಭೂಮಿ ಮತ್ತು ಹಕ್ಕು ವಂಚಿತರು ತಮ್ಮಹಕ್ಕುಗಳಿಗಾಗಿ 40-50 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲ ಬಡವರಿಗೆ ಭೂಮಿ, ವಸತಿ ದೊರೆಯದೆ ಹೋರಾಟ ನಿಲ್ಲುವುದಿಲ್ಲ. “ಭೂವಂಚಿತರ ಹಕ್ಕುಗಳಿಗಾಗಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 18 ದಿನಗಳ ಕಾಲ ಹೋರಾಟ ನಡೆಸಿದ್ದೇವೆ. ಬೆಳಗಾವಿ ಅಧಿವೇಶನದ ವೇಳೆಯೂ ಸತ್ಯಾಗ್ರಹ ನಡೆಸಿದ್ದೇವೆ. ಆದರೆ, ಸರ್ಕಾರಗಳು ಆಶ್ವಾಸನೆಗಳನ್ನಷ್ಟೇ ನೀಡಿ, ಜವಬ್ದಾರಿಯಿಂದ ನುಣುಚಿಕೊಂಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಿಂದಿನ ಸರ್ಕಾರ ಭ್ರಷ್ಟ ಸರ್ಕಾರ, ಜನ ವಿರೋಧಿ ಸರ್ಕಾರವೆಂದು ಸೋಲಿಸಿದ್ದೇವೆ. ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಜನಪರವಾಗಿ ಕೆಲಸ ಮಾಡಬೇಕು. ಭೂಮಿ, ವಸತಿ ವಂಚಿತರಿಗೆ ಭೂಮಿ, ವಸತಿ ನೀಡಬೇಕು. ಅದಕ್ಕಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ಸಭೆ ಕರೆಯಬೇಕು” ಎಂದು ಒತ್ತಾಯಿಸಿದರು. “ಉನ್ನತ ಮಟ್ಟದ ಸಭೆಗೆ ಕಂದಾಯ ಸಚಿವರು, ಅರಣ್ಯ ಇಲಾಖೆ ಸಚಿವರು, ವಸತಿ ಸಚಿವರು ಹಾಗೂ ಈ ಎಲ್ಲ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಇರಬೇಕು” ಎಂದು ಆಗ್ರಹಿಸಿದರು.
ಚಾಲನಾ ಮಾತುಗಳನ್ನು ಆಡಿದ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಾಕ್ಷರಾದ ನೂರು ಶ್ರೀಧರ್ ಮಾತನಾಡುತ್ತಾ, ಕೆಲವು ಪ್ರಶ್ನೆಗಳು ನಮ್ಮ ಗಮನಕ್ಕೆ ಬಂದಿವೆ. 1. ನಿಮ್ಮದೇ ಸರ್ಕಾರ ಬಂದಿದೆಯಲ್ಲಿ ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ. 2. ಮೊದಲೇ ಸರ್ಕಾರದ ಜೊತೆ ಮಾತನಾಡಿಕೊಂಡು ಸತ್ಯಾಗ್ರಹ ಮಾಡುತ್ತಿದ್ದೀರಿ ಅಲ್ಲವೇ? 3. ಇದು ದುಡುಕಿನ ಹೋರಾಟ ಅಲ್ಲವೇ? ಇಷ್ಟು ಬೇಗ ಹೋರಾಟ ರೂಪಿಸಬೇಕೆ? ಎನ್ನವಂತ ಪ್ರಶ್ನೆಗಳು ನಮ್ಮ ಕಿವಿಗೆ ಬಿದ್ದಿವೆ. ಇವು ಮುಖ್ಯ ಪ್ರಶ್ನೆಗಳಾಗಿವೆ.
ಹಿಂದಿನ ಸಿದ್ದರಾಮ್ಯ ಸರ್ಕಾದ ವಿರುದ್ದ ನವು ಪ್ರತಿಭಟನೆಗಳನ್ನು ಮಾಡಿದ್ದೇವೆ. ಅದರ ಫಲವಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂತ್ರಿಗಳು ಮತ್ತು ಹೋರಾಟಗಾರರನ್ನು ಒಳಗೊಂಡ ಹೈಪರ್ ಕಮಿಟಿ ರಚನೆಯಾಗಿತ್ತು. ಅದರಲ್ಲಿ ನಾವು ಇಟ್ಟ 12 ಹಕ್ಕೊತ್ತಾಯಗಳನ್ನು ಸರ್ಕಾರ ಒಪ್ಪಿಕೊಂಡಿತ್ತು ನಂತರ ಸಮ್ಮಿಶ್ರ ಸರ್ಕಾರ ಬಂತು ಆಮೇಲೆ ಖರೀದಿ ಸರ್ಕಾರ ಬಂತು ಹಳೆಯ ಭೂಮಿ ವಸತಿ ವಿಚಾರವನ್ನು ಮರೆತ ಈ ಸರ್ಕಾರ ಹಲವು ತಿದ್ದುಪಡಿಗಳನ್ನು ಮಾಡಿ ಶ್ರೀಮಂತರಿಗೆ ಭೂಮಿ ಕೊಡುವ ನೀತಿಗಳನ್ನು ರೂಪಿಸಿದರು. ಈ ಸರ್ಕಾರದಿಂದ ಏನು ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಯಿತು. ಹಾಗಾಗಿ ಈ ಸರ್ಕಾರನ್ನು ಸೋಲಿಸಿ ಹೊಸ ಸರ್ಕಾರ ತರುವಲ್ಲಿ ನಾವು ಕೆಲಸ ಮಾಡಿದ್ದೇವೆ.
ಈಗ ಈ ಹೊಸ ಸರ್ಕಾರ ಜನರ ಹಕ್ಕೊತ್ತಾಯವನ್ನು ಕೇಳಿಸಿಕೊಂಡು ಬಗೆಹರಿಸುವ ಕೆಲಸ ಮಾಡಿ ಸಾಬೀತು ಪಡಿಸಬೇಕಾದ ಅನಿವಾರ್ಯತೆ ಅವರಿಗಿದೆಯೇ ಹೊರತು ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ನಮಗಿಲ್ಲ. ರಾಜಿ ಹೋರಾಟವನ್ನು ದೊರೆಸ್ವಾಮಿ ಅವರು ಎಂದೂ ಮಾಡಿರಲಿಲ್ಲ ಮತ್ತು ನಮಗೂ ಅದನ್ನು ಕಲಿಸಲಿಲ್ಲ. ಇದು ಹೊಂದಾಣಿಕೆ ಹೋರಾಟ ಅಲ್ಲ.
ರಾಜ್ಯದ ಅರ್ಧ ಜನಸಂಖ್ಯೆಯಷ್ಟು ಜನರು ಭೂಮಿ/ವಸತಿಗಾಗಿ ಅರ್ಜಿ ಹಾಕಿದ್ದಾರೆ ಹೋರಾಡುತ್ತಿದ್ದಾರೆ. ಇದು ಬಹುಮುಖ್ಯವಾದ ಹೋರಾಟವಾಗಿದೆ. ಸರ್ಕಾರ ಬರಬೇಕು ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ಅಲ್ಲಿಯವರೆಗೆ ಎಷ್ಟೇ ದಿನವಾದರು ಈ ಹೋರಾಟ ಮುಂದುವರೆಯುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ಬಡಗಲಪುರ ನಾಗೇಂದ್ರ ಅವರು, ಮಾತನಾಡಿ, ರಾಜ್ಯದಲ್ಲಿ ಬಡವರಿಗೆ ಭೂಮಿ ಹಂಚಲು ಸಾಕಷ್ಟು ಭೂಮಿ ಇದೆ. ಕೇವಲ ಒಂದು ವಾರದಲ್ಲಿ ಬಡವರ ಭೂಮಿ, ವಸತಿ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ, ಕೆಲವು ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಬಡವರಿಗೆ ವಂಚಿಸಲಾಗುತ್ತಿದೆ. “ಸಂಘಪರಿವಾರದವರು ಭೂಮಿಗಾಗಿ ಯಾವುದೇ ಅರ್ಜಿ ಹಾಕಿರದಿದ್ದರೂ, ರಾಜ್ಯದ ಹಲವೆಡೆ ಅವರರಿಗೆ ಭೂಮಿ ನೀಡಲಾಗಿದೆ. ಆದರೆ, ಬಡವರು ಐದಾರು ದಶಕಗಳಿಂದ ಭೂಮಿ, ವಸತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೂ, ಬಡವರಿಗೆ ಭೂಮಿ ನೀಡಲಾಗಿಲ್ಲ. ವಾಸಿಸಲು ಸೂರು ನೀಡಿಲ್ಲ” ಎಂದು ಕಿಡಿಕಾರಿದರು.
ಭೂಮಿ, ವಸತಿ ವಂಚಿತರ ಈ ಹೋರಾಟ ಹೊಸದಾಗಿ ಆರಂಭವಾಗಿಲ್ಲ. 10 ವರ್ಷಗಳ ಹಿಂದೆ ಈ ಹೋರಟ ಆರಂಭವಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರ ಭೂಮಿ, ವಸತಿ ಹಕ್ಕು ವಂಚಿರತರಿಗೆ ಭೂಮಿ, ನಿವೇಶನ, ವಸತಿಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ತಾನೇ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು” ಎಂದು ಒತ್ತಾಯಿಸಿದರು.
ವೇದಿಕೆಯ ಮೇಲಿದ್ದ ಬರಿಹೊಟ್ಟೆಯಲ್ಲಿರುವ ಸತ್ಯಾಗ್ರಹಿಗಳು ತಮ್ಮ ಜಿಲ್ಲೆಯ ಸಮಸ್ಯೆಗಳನ್ನು ವಿವರಿಸುತ್ತಾ ಹಕ್ಕೊತ್ತಾಯಗಳನ್ನು ಮುಂದಿಟ್ಟರು.
ಸಂಜೆಯ ಹೊತ್ತಿಗೆ ಸತ್ಯಾಗ್ರಹದ ಚುರುಕು ಮುಖ್ಯಮಂತ್ರಿಗಳ ವರೆಗೆ ಮುಟ್ಟಿತು. ಹೋರಾಟ ಸಮಿತಿಯ ಕಾರ್ಯದರ್ಶಿ ಮಂಡಲಿಯ ಸದಸ್ಯರಿಗೆ ಸಭೆಗೆ ಕರೆಯಲಾಯಿತು.
ಮುಖ್ಯಮಂತ್ರಿಗಳ ಜೊತೆಗಿನ ಸಭೆಯನ್ನು ಮುಗಿಸಿಕೊಂಡು ಹೋರಾಟಗಾರರು ವಾಪಾಸ್ಸಾದರು, ಮಾಚಿ ಸಚಿವರಾಗಿದ್ದ ಎಚ್. ಆಂಜನೇಯ ಅವರು ಸರ್ಕಾರದ ಪ್ರತಿನಿಧಿಯಾಗಿ ಹಕ್ಕೊತ್ತಾಯವನ್ನು ಸ್ವೀಕರಿಸಲು ಸತ್ಯಾಗ್ರಹದ ಸ್ಥಳಕ್ಕೆ ಬಂದರು. ಭೂಮಿ ವಸತಿ ಹೋರಾಟದ ಕುರಿತ ಎಲ್ಲಾ ಮಾಹಿತಿಯನ್ನು ಮುಖಂಡರಾದ ಕುಮಾರ್ ಸಮತಳ ಅವರು ಸಂಕ್ಷಿಪ್ತವಾಗಿ ಮುಂದಿಟ್ಟರು.
ನಂತರ ಎಚ್. ಆಂಜನೇಯ ಅವರು ಮಾತನಾಡಿ, ಸಿದ್ದರಾಮಯ್ಯ ಅವರ ಕಾಲದಲ್ಲಿ ನಾವು ಹಲವಾರು ಶೋಷಿತ ಸಮುದಾಯಗಳ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ.
ಯಾರು ಭೂಮಿಯಲ್ಲಿ ಉಳಿಮೆ ಮಾಡುತ್ತಿದ್ದಾರೋ, ಸರ್ಕಾರೀ ಜಾಗದಲ್ಲಿ ಮನೆಯಲ್ಲಿ ಇದ್ದಿರೋ ಅದರ ಮಾಲೀಕರು ನೀವೇ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ ನಾನು ಅವರ ಪ್ರತಿನಿಧಿಯಾಗಿ ನಿಮಗೆ ಅದೇ ಮಾತನ್ನು ಹೇಳುತ್ತಿದ್ದೇನೆ. ನಾನು ಕೇವಲ ಸರ್ಕಾರದ ಪ್ರತಿನಿಧಿಯಲ್ಲ ನಾನು ನಿಮ್ಮ ಪ್ರತಿನಿಧಿಯೂ ಹೌದು.
ಇಂದು ಕಂದಾಯ ಮಂತ್ರಿಗಳು ಊರಲ್ಲಿ ಇಲ್ಲ. ಅವರು ವಾಪಾಸು ಬಂದಮೇಲೆ ನಿಮ್ಮ ಪ್ರತಿನಿಧಿಯಾಗಿಯೇ ಮಾತನಾಡುತ್ತೇನೆ. ಹೈಪವರ್ ಕಮಿಟಿ ಸಭೆಗೆ ನಿಮ್ಮನ್ನು ಕರೆಯಿಸಿ ಮಾತನಾಡುತ್ತೇವೆ. ಸಧ್ಯಕ್ಕೆ ಈ ಸತ್ಯಗ್ರಹವನ್ನು ಕೈ ಬಿಡಿ, ಸಭೆಗೆ ಬನ್ನಿ ಎಂದರು.
ಹಲವಾರು ಜನ ಅನಕ್ಷರಸ್ಥರು ಇರುತ್ತಾರೆ ಉಳಿಮೆ ಮಾಡುತ್ತಿದ್ದರೂ ಅರ್ಜಿ ಹಾಕುವುದು ಗೊತ್ತಿರುವುದಿಲ್ಲ. ಹಾಗಾಗಿ ಸರ್ಕಾರವೇ ಪ್ರಮಾಣಿಕವಾಗಿ ಸರ್ವೇ ಮಾಡಬೇಕು ಎಂದೂ ಹೇಳಿದರು. ಉಳುವವನೇ ಭೂಮಿ ಒಡಯ ಮತ್ತು ವಾಸಿಸುವನೇ ಮನೆಯ ಒಡಯ ಎಂದು ನಾವು ಹಿಂದೆಯೂ ಹೇಳಿದ್ದೇವು, ಈಗಲೂ ಹೇಳುತ್ತಿದ್ದೇವೆ. ಇದನ್ನು ಹೋರಾಟಗಾರರಿಗೆ ಸರಿಯಾಗಿ ಹೇಳಿ ಬಾ ಎಂದು ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಿಮ್ಮ ಪರವಾಗಿ ಕಾಯಿದೆ ಮಾಡಲು ನಮ್ಮ ಸರ್ಕಾರ ಸದಾ ಜನಪರವಾಗಿ ಇರುತ್ತದೆ ಎಂದು ಹೇಳಿದರು.
ಸರ್ಕಾರ ಯಾವಾಗಲೂ ನಿಮ್ಮ ಪರವಾಗಿ ಇರುತ್ತದೆ. ನಿಮ್ಮನ್ನು ಒಕ್ಕಲೆಬ್ಬಿಸುವ ಕೆಲಸವನ್ನು, ನಿಮ್ಮ ಹೊಟ್ಟೆಮೇಲೆ ಹೊಡೆಯುವ ಕೆಲಸವನ್ನು ಮಾಡುವುದಿಲ್ಲ ಎಂದು ಸಿ,ಎಮ್ ಪರವಾಗಿ ಅವರದ್ದೇ ಮಾತುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಹೋರಾಟ ಯಶಸ್ವಿ ಆಗಲಿ, ನಿಮಗೆ ಭೂಮಿ ಸಿಗಲಿ, ವಾಸಕ್ಕೆ ಮನೆ ಸಿಗಲಿ. ಈಗ ಸಿಗುತ್ತಿರುವ ಆಶ್ರಯ ಮನೆಗೆ ಸುಮಾರು 1.7 ಲಕ್ಷ ಸಿಗುತ್ತಿದೆ. ಇದು ಸಾಲದು ಈ ಹಣ ಎರಡು ಪಟ್ಟು ಅಥವಾ ಮೂರು ಪಟ್ಟು ಹೇಚ್ಚಾಗಬೇಕು ಎಂದೂ ಹೇಳಿದರು.
ಅವರು ಮಾತಿನ ನಂತರ ನೂರ್ ಶ್ರೀಧರ್ ಅವರು ಪ್ರತಿಕ್ರಿಯೆ ನೀಡುತ್ತಾ, ಸಿ.ಎಮ್ ಪರವಾಗಿ ಎಚ್. ಆಂಜನೇಯ ಅವರು ಬಂದು ಮಾತನಾಡಿದ್ದು ಧನ್ಯವಾದಗಳು. ಆದರೆ ನಾವು ಇನ್ನೊಂದು ಹೇಳಲು ಬಯಸುತ್ತೇವೆ. ಇದಕ್ಕೆ ಮತ್ತೊಂದು ದೊಡ್ಡ ಸಭೆ ಮಾಡಿ ಫೋಟೋ ಸೆಷನ್ ಆದರೆ ಅದು ನಮಗೆ ಬೇಡ. ಮಂತ್ರಿಗಳು ಎಷ್ಟೇ ಕೂಗಾಡಿದರೂ ದೊಡ್ಡ ಬದಲಾವಣೆಯನ್ನು ಮಾಡಲು ಸಾದ್ಯವಾಗಿಲ್ಲ. ಈ ಹಿಂದೆಯೂ ಕಾಗೋಡು ತಿಮ್ಮಪ್ಪ ಇದನ್ನು ಮಾಡಿದ್ರು ಆಗಿಲ್ಲ. ಇದು ಬಲಾಢ್ಯರ ವ್ಯವಸ್ಥೆಯಾಗಿದೆ. ಅಧಿಕಾರಿಗಳಿಗೆ ಜನರು ಕಾಣುತ್ತಿಲ್ಲ ಬರೀ ಪೇಪರ್ ಗಳು ಕಾಣಿಸುತ್ತವೆ. ಬರೀ ಅರ್ಜಿ/ದಾಖಲೆಗಳನ್ನು ಕೇಳುತ್ತಾರೆ. ಜನರನ್ನು ಹೀಗೆ ಅಲೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಿಮ್ಮ ಎಲ್ಲರ ಮನಸ್ಸು ಬಯಸಿದರೂ ಇದು ಮಾಡಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಇದಕ್ಕೆ ಪಾಲಿಸಿ ತೀರ್ಮಾನವಾಗಬೇಕು. ಹಾಗಾಗಿ ಈ ಮೀಟಿಂಗ್ ಆಗಲೇಬೇಕು. ನಾವು ಇಷ್ಟು ವರ್ಷ ಕಾದಿದ್ದೇವೆ ಈಗಲೂ ಕಾಯುತ್ತೇವೆ. ಆದರೆ ಮೀಟಿಂಗ್ ಆಗಲೇಬೇಕು ಎಂದು ಆಗ್ರಹಿಸಿದರು. ಸಭೆಯ ದಿನಾಂಕವನ್ನು ಇದೇ ತಿಂಗಳ 20ನೇ ತಾರೀಖಿನಂದು ತಿಳಿಸಬೇಕು ಎಂದರು.
ಈ ಭರವಸೆಯ ಮೇಲೆ ನಾವು ಉಪವಾಸ (ಬರಿ ಹೊಟ್ಟೆ) ಸತ್ಯಾಗ್ರಹವನ್ನು ನಿಲ್ಲಿಸಬಹುದು ಎಂದು ತೀರ್ಮಾನ ಮಾಡಲಾಯಿತು. ಸತ್ಯಾಗ್ರಹಿಗಳಿಗೆ ಹಣ್ಣ ಮತ್ತು ಬನ್ ನೀಡಲಾಯಿತು. ಸಂವಿಧಾನ ಆಶಯದ ಹಾಡು ಹಾಡಿ ಸತ್ಯಾಗ್ರಹವನ್ನು ಮುಗಿಸಲಾಯಿತು.


