-
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಕಲಿತ — ಅವರ ತಂದೆ ಶಾಂತವೀರಯ್ಯ ನವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಸರ್ಕಾರಿ ಶಾಲೆ..
-
130 ವರ್ಷಗಳ ಇತಿಹಾಸವುಳ್ಳ ಸರ್ಕಾರಿ ಶಾಲೆ — 31 ಲಕ್ಷ ರೂಗಳ ಅನುದಾನ ಬಳಕೆ ಮಾಡುವಲ್ಲಿ ವಾದ — ಪ್ರತಿವಾದ…?
ವಿಶೇಷ ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಸರ್ಕಾರಿ ಶಾಲೆ ನೂತನ ಕಟ್ಟಡ ಅನುದಾನ ಬಳಕೆ ವಿಚಾರದಲ್ಲಿ ಕನ್ನಡ ಶಾಲೆ ಹಾಗೂ ಉರ್ದು ಶಾಲೆ ಎಂಬ ವಾದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿ ಜಿಲ್ಲಾಧಿಕಾರಿ, ಡಿಡಿಪಿಐ, ತಹಶೀಲ್ದಾರ್ ಹಾಗೂ ಬಿಇ ಓ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕ ಓಲೈಕೆಗೆ ಮುಂದಾದ ಘಟನೆಯೊಂದು ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಒಂದು ರೀತಿ ಗೊಂದಲದ ಗೂಡಾಗಿದ್ದು, ಶಾಲಾ ಕಟ್ಟಡ ನಿರ್ಮಾಣದ ಅನುದಾನ ಬಳಕೆಯಲ್ಲಿ ಕನ್ನಡ ಶಾಲೆ ಹಾಗೂ ಉರ್ದು ಶಾಲೆ ಎಂದು ಸಾರ್ವಜನಿಕರಲ್ಲಿ ವಿಭಿನ್ನ ಮನಸ್ಥಿತಿ ಏರ್ಪಟ್ಟು, ಶಾಲೆ ಇದ್ದ ಸ್ಥಳವನ್ನು ಬಿಟ್ಟು ಬೇರೆ ಕಟ್ಟಡ ನಿರ್ಮಾಣಕ್ಕೆ ಒಂದು ಗುಂಪು ವಾದ ಮಂಡಿಸಿದರೆ ಮತ್ತೊಂದು ಗುಂಪು ಹೊಸ ಕಟ್ಟಡ ನಿರ್ಮಾಣವಾಗುತ್ತಿಲ್ಲ ಹಳೆ ಕಟ್ಟಡವಿದ್ದ ಸ್ಥಳದಲ್ಲಿ ನಿರ್ಮಾಣವಾಗಲಿ ಎಂಬ ವಾದ ಮಂಡಿಸುವ ಮೂಲಕ ಊರಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ತಂದೆ ಶಾಂತವೀರಯ್ಯ ಮುಖ್ಯೋಪಾಧ್ಯಯರಾಗಿ ಕಾರ್ಯ ನಿರ್ವಹಿಸಿದಂತ ಬಹು ಮುಖ್ಯ ಶಾಲೆ ಎನಿಸಿಕೊಂಡ ಅದರಲ್ಲೂ ಇಡೀ ತಾಲೂಕಿನಲ್ಲಿ ಎರಡನೇ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ 130 ವರ್ಷಗಳ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ 31 ಲಕ್ಷದ ಅನುದಾನ ಬಳಕೆಯಲ್ಲಿ ವಾದ ಪ್ರತಿವಾದ ಕೇಳಿ ಬಂದಿದ್ದು, ಶಾಲಾ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಕೆಲವು ಸಾರ್ವಜನಿಕರು ತಡೆ ಹೊಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
ಅಕ್ಕಿರಾಂಪುರ ಸರ್ಕಾರಿ ಶಾಲೆ 132 ವರ್ಷಗಳ ಹಿಂದೆ 1876 ರಲ್ಲಿ ಶಾಮಣ್ಣ ಎಂಬುವರು ಸಜ್ಜನಗಂಗಪ್ಪ ಎಂದು ಅವರ ತಂದೆ ಹೆಸರಿನಲ್ಲಿ ಒಂದು ಶಾಲೆಯನ್ನ ಅವರೇ 2 ಎಕರೆ ಜಮೀನಿನಲ್ಲಿ ಶಾಲಾ ಬಿಲ್ಡಿಂಗ್ ಕಟ್ಟಿಸಿ ಈ ಭಾಗದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಒಂದು ಉತ್ತಮ ಬಿಲ್ಡಿಂಗ್ ನಿರ್ಮಾಣ ಮಾಡಿಕೊಟ್ಟಿದ್ದನ್ನ ನೆನಪಿಸಿಕೊಳ್ಳಬಹುದು, ಇದಾದ ನಂತರ ಸರ್ಕಾರಿ ಅನುದಾನದಲ್ಲಿ ಮತ್ತಷ್ಟು ಬಿಲ್ಡಿಂಗ್ ಪ್ರಾರಂಭಗೊಂಡು ಪ್ರಾರಂಭ ಹಂತದಲ್ಲಿ ಕನ್ನಡ ಶಾಲೆಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸತತವಾಗಿ ನಡೆಯುತ್ತಾ ಬಂದಿದ್ದು, ನಂತರ ಬಹಳ ವರ್ಷಗಳ ನಂತರ ಉರ್ದು ಶಾಲೆ ಪ್ರಾರಂಭಗೊಂಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೆಲವೊಂದು ಕೊಠಡಿಗಳಲ್ಲಿ ಉರ್ದು ಶಾಲೆ ನಡೆಯುತ್ತಾ ಬಂದಿದ್ದು, ಈಗ 31 ಲಕ್ಷ ಅನುದಾನ ಶಾಲಾ ಕೊಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಕನ್ನಡ ಪಾಠಶಾಲೆ ಹಾಗೂ ಉರ್ದು ಪಾಠಶಾಲೆ ಎಂದು ಪ್ರತ್ಯೇಕವಾದದ ಮೂಲಕ ಗೊಂದಲ ಸೃಷ್ಟಿಯಾಗಿ ಸಾರ್ವಜನಿಕರು ಕಾಮಗಾರಿಗೆ ತಡೆಹೊಡ್ಡಿದ್ದಾರೆ .
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಕ್ಕಿ ರಾಂಪುರ ದಲ್ಲಿ ಓದಿದ ಬಹಳಷ್ಟು ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಕೆಎಎಸ್, ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಸ್ಥಾನದಲ್ಲಿರುವಂಥ ಹಳೆ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಕೈಜೋಡಿಸಿದ್ದು, ಅದೇ ಮಾದರಿಯಲ್ಲಿ ಹಳೆಯ ವಿದ್ಯಾರ್ಥಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತಿಕ್ ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ತಾನು ಈ ಶಾಲೆಯ ಹಳೆಯ ವಿದ್ಯಾರ್ಥಿ ಯಾದ ಕಾರಣಕ್ಕಾಗಿ 31 ಲಕ್ಷ ಅನುದಾನವನ್ನ ಶಾಲಾ ಉನ್ನತೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೊಳಿಸಿದರೂ ಈಗ ಗ್ರಾಮದ ಸಾರ್ವಜನಿಕರಲ್ಲಿ ಹೊಸ ಕಟ್ಟಡ ನಿರ್ಮಾಣದ ಪ್ರಕ್ರಿಯೆಗೆ ಗೊಂದಲ ಸೃಷ್ಟಿಯಾಗಿ ವಿವಿಧ ವಾದ ಮಂಡಿಸುವ ಮೂಲಕ ಇಡೀ ವಾತಾವರಣ ಕಲುಷಿತಗೊಂಡಿದೆ.
ಶಾಲಾ ಬಿಲ್ಡಿಂಗ್ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕಿರಾಂಪುರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಶಾಲಾ ಬಿಲ್ಡಿಂಗ್ ಒಂದು ರೀತಿಯಲ್ಲಿ ಹಿಂದೂ – ಮುಸ್ಲಿಂ ಎಂಬುವ ಬಣ್ಣ ಹಚ್ಚಲು ಕೆಲವಷ್ಟು ಮಂದಿ ಮುಂದಾದರೆ, ಇನ್ನಷ್ಟು ಮುಂದೆ ನಮಗೆ ಸರ್ಕಾರಿ ಶಾಲೆಗೆ ಅನುದಾನ ಬಿಡುಗಡೆಯಾಗಿದೆ ಶಾಲಾ ನಿರ್ಮಾಣಕ್ಕೆ ನಮಗೆ ಯಾವುದೇ ಧರ್ಮ ಜಾತಿ ಅವಶ್ಯಕತೆ ಇಲ್ಲ ಕಟ್ಟಡ ನಿರ್ಮಾಣವಾಗಲಿ ಎಂದು ಪ್ರತಿಪಾದಿಸಿದರೆ, ಕೆಲವರು ಶಾಲಾ ಕಾಂಪೌಂಡ್ ಒಳಗಡೆ ವಿದ್ಯಾರ್ಥಿಗಳ ಆಟೋಟಕ್ಕೆ ಶಾಲಾ ಆಟದ ಮೈದಾನ ಅವಶ್ಯಕತೆ ಇರುವುದರಿಂದ ಬಿಲ್ಡಿಂಗ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ವಾದಿಸಿದರೆ, ಅಲ್ಲಿನ ಇನ್ನೂ ಕೆಲವರು ಇಂದು ಹೊಸದಾಗಿ ಬಿಲ್ಡಿಂಗ್ ಕಟ್ಟುತ್ತಿಲ್ಲ, ಹಳೆಯ ಬಿಲ್ಡಿಂಗ್ ಹೊಡೆದು ಹೊಸ ಬಿಲ್ಡಿಂಗ್ ಕಟ್ಟಲಾಗುತ್ತಿದ್ದು ಇದಕ್ಕೆ ಯಾವುದೇ ಅನಾವಶ್ಯಕವಾಗಿ ಬಣ್ಣಹಚ್ಚುವ ಅವಶ್ಯಕತೆ ಇಲ್ಲ ಎಂದು ವಾದಿಸುತ್ತಿದ್ದಾರೆ.
ಶಾಲಾ ಕೊಠಡಿ ನಿರ್ಮಾಣದಲ್ಲಿ ಗೊಂದಲ ಸೃಷ್ಟಿ:
ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ತಹಶೀಲ್ದಾರ್ ಮಂಜುನಾಥ್, ಮಧುಗಿರಿ ಶೈಕ್ಷಣಿಕ ಜಿಲ್ಲೆ ಡಿ ಡಿ ಪಿ ಐ ಗಿರಿಜಾ, ಸಿಪಿಐ ಅನಿಲ್ ,ಪಿಎಸ್ಐ ಚೇತನ್ ಕುಮಾರ್ ಹಾಗೂ ಬಿ ಇ ಓ ನಟರಾಜು ಸ್ಥಳೀಯ ಮುಖಂಡರೊಂದಿಗೆ ಸಂಧಾನ ಪ್ರಕ್ರಿಯೆ ಮಾತುಕತೆ ನಡೆಸಿದ್ದು, ಸಾರ್ವಜನಿಕರು ಅಭಿವೃದ್ಧಿ ವಿಚಾರ ಬಂದ ಸಂದರ್ಭದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವುದು ಬಹಳಷ್ಟು ಮುಖ್ಯ ಎಂದು ಬಹಳಷ್ಟು ಸಾರ್ವಜನಿಕರಿಂದ ಕೇಳಬಂದಿದ್ದು, ಸೌಹಾರ್ದೋಹಿತವಾಗಿ ಪರಿಹಾರ ಕಂಡು ಸುಖಾಂತ್ಯ ಕಾಣಲಿ ಎಂಬ ಅಭಿಪ್ರಾಯ ಬಹಳಷ್ಟು ಜನರಿಂದ ಕೇಳಿ ಬರುತ್ತಿದೆ.
ಅಕ್ಕಿರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬಹಳ ವರ್ಷಗಳಿಂದಲೂ ಉತ್ತಮವಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಗುಣಮಟ್ಟ ಹೆಚ್ಚಿಸುವಂತಹ ಶಾಲೆಯಾಗಿ ಹೊರಹೊಮ್ಮಿದ್ದು, ಈ ಶಾಲೆಯಲ್ಲಿ ಓದಿದಂತಹ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಶಾಲೆಯ ಹೊಸ ಕಟ್ಟಡ ನಿರ್ಮಾಣ ವಿಚಾರದಲ್ಲಿ ಗೊಂದಲ ಇದ್ದಿರುವುದು ದುರಾದೃಷ್ಟಕರ, 31 ಲಕ್ಷ ಅನುದಾನ ಶಾಲಾ ಕಟ್ಟಡಕ್ಕೆ ಬಿಡುಗಡೆಗೊಂಡಿದ್ದು, ಶಾಲಾ ಕಟ್ಟಡ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವ ಅವಶ್ಯಕತೆ ಇದೆ, ಇದು ನಾವು ಓದಿದ ಶಾಲೆ ಜೊತೆಗೆ ನಮ್ಮ ಮಕ್ಕಳುಗಳು ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು , ವಿದ್ಯಾಭ್ಯಾಸದ ದೃಷ್ಟಿಯಿಂದ ಕೊಠಡಿಗಳ ಅವಶ್ಯಕತೆ ಇದ್ದು , ಹೊಸ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು.
— ನಾಗರಾಜು, ಕಾಂಗ್ರೆಸ್ ಮುಖಂಡ, ಆರ್. ವೆಂಕಟಪುರ.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ 1976ರಲ್ಲಿ ಪ್ರಾರಂಭಗೊಂಡಿದ್ದು , ನಾನು ಸಹ ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯಾಗಿದ್ದು, ಯಾರೋ ದಾನಿಗಳು ನೀಡಿದಂತ ಜಾಗ ಅದು ದಾನಿಗಳು ಬಹಳ ವರ್ಷಗಳ ಹಿಂದೆ ಒಂದು ಬಿಲ್ಡಿಂಗ್ ಕಟ್ಟಿಸಿಕೊಟ್ಟು ಇಲ್ಲಿನ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ, ಈಗ ನೂತನವಾಗಿ ಹೊಸ ಶಾಲೆ ನಿರ್ಮಾಣಕ್ಕೆ ನಮ್ಮದೇನು ತಕರಾರು ಇಲ್ಲ, ಆದರೆ ಉರ್ದು ಶಾಲೆಗೆ ಬಹಳಷ್ಟು ಕೊಠಡಿಗಳಿವೆ, ಅವರಿಗೆ ಆ ಕೊಠಡಿಗಳಲ್ಲಿ ಅವಕಾಶ ಕಲ್ಪಿಸಿ ಕೊಡಲಿ, ಈ ಶಾಲೆಗೆ ವಿದ್ಯಾರ್ಥಿಗಳಿಗೆ ಆಟದ ಮೈದಾನ ಅವಶ್ಯಕತೆ ಇರುವುದರಿಂದ ಈ ಜಾಗದಲ್ಲಿ ಬಿಲ್ಡಿಂಗ್ ನಿರ್ಮಾಣವಾದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ.
— ಮುಕ್ಕಣ್ಣಯ್ಯ, ಬಿಜೆಪಿ ಸ್ಥಳೀಯ ಮುಖಂಡ.
ಶಾಲಾ ಕೊಠಡಿ ನಿರ್ಮಾಣಕ್ಕೆ 31 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಇದನ್ನ ಹಳೆಯ ಕೊಠಡಿ ಶಿಥಿಲಗುಡಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ, ನಮಗೆ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಅವಶ್ಯಕತೆ ಇರುವುದರಿಂದ ಹೊಸ ಬಿಲ್ಡಿಂಗ್ ಈ ಜಾಗದಲ್ಲಿ ಅವಶ್ಯಕತೆ ಇಲ್ಲ ಎಂಬ ವಾದದಲ್ಲಿ ಇದ್ದೇವೆ ಯಾದರೂ ಯಾವುದೇ ಕಾರಣಕ್ಕೂ ಅನುದಾನ ಸರ್ಕಾರಕ್ಕೆ ವಾಪಸ್ ಹೋಗದ ರೀತಿಯಲ್ಲಿ ಸಾರ್ವಜನಿಕರು ಸಹಕರಿಸಿ ಒಂದು ಉತ್ತಮ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಲಿ.
— ಉಮೇಶ್ ಅಧ್ಯಕ್ಷರು, ಎಸ್ ಡಿ ಎಂ ಸಿ. ಅಕ್ಕಿರಾಂಪುರ.
ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ 31 ಲಕ್ಷ ಅನುದಾನ ಸರ್ಕಾರದಿಂದ ಬಂದಿದೆ, ಇಲ್ಲಿಯ ಹಳೆಯ ವಿದ್ಯಾರ್ಥಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತಿಕ್ ಸಾಹೇಬರು ವಿಶೇಷ ಕಾಳಜಿ ವಹಿಸಿ ತಾನು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಶಾಲಾ ಬಿಲ್ಡಿಂಗ್ ಅವಶ್ಯಕತೆ ಇದೆ ಎಂಬ ಮನವಿಗೆ ಖುದ್ದು ಜವಾಬ್ದಾರಿ ವಹಿಸಿ ಅನುದಾನ ಬಿಡುಗಡೆಗೊಳಿಸಿದ್ದಾರೆ, ಈ ಅನುದಾನವನ್ನ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸದೆ , ಹಳೆಯ ಶಾಲಾ ಬಿಲ್ಡಿಂಗ್ ಹೊಡೆದ ಸ್ಥಳದಲ್ಲಿ ನಿರ್ಮಾಣ ಮಾಡುತ್ತಿರುವುದರಿಂದ ಯಾವುದೇ ಗೊಂದಲ ಸೃಷ್ಟಿಸದೆ ಹೊಸ ಬಿಲ್ಡಿಂಗ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಕೊಡಲಿ.
— ಗುಲಾಬ್ ಸಾಹೇಬ್..
ಮುಸ್ಲಿಂ ಮುಖಂಡರು. ಅಕ್ಕಿರಾಂಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx