ತುಮಕೂರು : ಮಹಿಳೆಯರ ಸಬಲೀಕರಣ, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿಯಲ್ಲಿ ರೂಪಿಸಲಾದ ‘ಕಲ್ಪತರು — ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ’ ಬ್ರ್ಯಾಂಡ್ ಮತ್ತು ಲೋಗೋವನ್ನು ಬಿಡುಗಡೆ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮಹಿಳೆಯರ ಆರ್ಥಿಕ ಅಭಿವೃದ್ಧಿ ಹಾಗೂ ಜೀವನೋಪಾಯವೃದ್ಧಿಗೆ ಪೂರಕವಾದ ಈ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು.
ಮಹಿಳೆಯರ ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎನ್ ಜಿಒ ವತಿಯಿಂದ ಉಚಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ FWWB ಸಂಸ್ಥೆಯ ಸಹಯೋಗವೂ ಇದೆ. ಈ ಉಪಕ್ರಮವು ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವ ಬೆಳೆಸಲು ಹಾಗೂ ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಗುರುತು ಒದಗಿಸಲು ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ಸ್ಮಿತಾ ವಿಜಯಕುಮಾರ್ ಅವರು ಉಪಸ್ಥಿತರಿದ್ದರು. ‘ಕಲ್ಪತರು’ ಬ್ರ್ಯಾಂಡ್ ಮೂಲಕ ತುಮಕೂರು ಜಿಲ್ಲೆಯ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಪ್ರತ್ಯೇಕ ಗುರುತು ದೊರೆಯುವುದರೊಂದಿಗೆ, ಅವುಗಳ ಗುಣಮಟ್ಟ ಮತ್ತು ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಅವಕಾಶ ಕಲ್ಪಿಸುವ ಆಶಯ ಹೊಂದಲಾಗಿದೆ.
ಮಹಿಳೆಯರ ಪರಿಶ್ರಮ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ಗುರುತಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ ಎಂಬ ಆಶಯದೊಂದಿಗೆ ಸ್ಥಳೀಯ ಮಹಿಳಾ ಉದ್ಯಮಗಳನ್ನು ಉತ್ತೇಜಿಸಿ, ಅವರ ಸಾಧನೆಯನ್ನು ನಾಡಿನ ಹೆಮ್ಮೆಯನ್ನಾಗಿಸುವ ದಿಸೆಯಲ್ಲಿ ‘ಕಲ್ಪತರು’ ಬ್ರ್ಯಾಂಡ್ ಮಹತ್ವದ ಹೆಜ್ಜೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
