ತುಮಕೂರು: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದ ಚಿರತೆಯು ಕಾಡ್ಗಿಚ್ಚಿಗೆ ಬಲಿಯಾಗಿರೋ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅರಣ್ಯ ಇಲಾಖೆಯ ಯಡವಟ್ಟಿನಿಂದ ಚಿರತೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆ ಅರಣ್ಯ ಇಲಾಖೆ ಮದ್ಲೇಹಳ್ಳಿ ಗ್ರಾಮದ ಸರ್ವೇನಂಬರ್ 10ರಲ್ಲಿ ನಾರಾಯಣಪ್ಪ ಬಿನ್ ಶಂಕರಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನ್ ಇರಿಸಿತ್ತು. ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಚಿರತೆ ಸೆರೆಯಾಗಿತ್ತು.
ಆದರೆ ಈ ಪ್ರದೇಶದಲ್ಲಿ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ಬೋನಿಗೆ ಬಿದ್ದಿದ್ದ ಚಿರತೆ ಹೊರಬರಲಾಗದೆ ಬೆಂಕಿ ಕೆನ್ನಾಲಿಗೆಗೆ ಉಸಿರುಗಟ್ಟಿ ಸಾವನ್ನಪ್ಪಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳುಹಾಗೂ ಕಿಬ್ಬನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆ.ಬಿ.ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿರತೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅರಣ್ಯ ಇಲಾಖೆಯ ನಿರ್ಲಕ್ಷ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಬೋನ್ ಇಟ್ಟಿದೆ ಆದರೆ ಬೋನಿನಲ್ಲಿ ಚಿರತೆ ಬಿದ್ದಿರುವ ಬಗ್ಗೆ ಮಾಹಿತಿ ಕಲೆಹಾಕಲು ವಿಫಲವಾದ ಹಿನ್ನೆಲೆ ಚಿರತೆ ಸಾವು ಸಂಭವಿಸಿದೆ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4