ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಭಾರತವನ್ನು ನಿರ್ಮಿಸೋಣ ಎಂದು ಜಿಲ್ಲೆಯ ಪಾವಗಡ ತಾಲೂಕು ರಾಜವಂತಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನರಸಪ್ಪ ಅವರು ತಿಳಿಸಿದರು.
ಸೋಮವಾರ ದವಡಬೆಟ್ಟ ಗ್ರಾಮದಲ್ಲಿ ಡಾ.ಬಿ.ಅರ್. ಅಂಬೇಡ್ಕರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ಭಾರತೀಯ ಸಮಾಜವನ್ನು ಬದಲಾಯಿಸಲು ಶ್ರಮಿಸಿದ ಮಹಾನ್ ಕ್ರಾಂತಿಕಾರಕರಾಗಿದ್ದರು.
ಶಿಕ್ಷಣ ಕುರಿತು ಅಂಬೇಡ್ಕರ್ ಅವರ ನಂಬಿಕೆಯನ್ನು ಉಲ್ಲೇಖಿಸಿದ ಅವರು, ‘ಶಿಕ್ಷಣವೇ ಶಕ್ತಿಯ ಮೂಲ — ಇಂದಿನ ತಲೆಮಾರಿಗೆ ದಾರಿ ತೋರಿಸುವ ದೀಪವಾಗಿದೆ’. ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ಬದಿಗೊತ್ತಿ, ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವಂತೆ ಹೋರಾಡಿದ ಮಹಾನ್ ನಾಯಕ. ಅವರು ನೀಡಿದ ಸಂವಿಧಾನವು ಇಂದು ಎಲ್ಲರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ‍್ಯ ಹಾಗೂ ಬಾಂಧವ್ಯ ಎಂಬ ಪ್ರಮುಖ ಮೌಲ್ಯಗಳನ್ನು ಕಲ್ಪಿಸಿದೆ ಎಂದರಲ್ಲದೆ “ಸ್ವಾತಂತ್ರ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಅದು ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನೂ ಒಳಗೊಂಡಿರಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ರಾಜ್ಯ ವಿಮಾ ನಿಗಮ ಅಧಿಕಾರಿ ನರೇಶ್ ಡಿ.ಎಮ್., ಆಶಾ ಕಾರ್ಯಕರ್ತೆ ಭುವನೇಶ್ವರಿ, ಅಂಗನವಾಡಿ ಶಿಕ್ಷಕ ಶಿವಮ್ಮ, ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ತಿಪ್ಪಮ್ಮ, ಗ್ರಾಮ ಪಂಚಾಯಿತಿಯ ಸದಸ್ಯ ದುಗ್ಗಮ್ಮ, ಮತ್ತಿತರ ಗ್ರಾಮಸ್ಥರು ಇದ್ದರು.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿನಿಯರಾದ ಶ್ರಾವಣಿ, ನವ್ಯ, ಕಾವ್ಯ, ಶ್ಯಾಮಲ ಹಾಗೂ ಗೃಹಿಣಿಯರಾದ ದುಗ್ಗಮ್ಮ, ಭುವನೇಶ್ವರಿ, ಗಂಗಮ್ಮ, ಮಂಜುಳ, ನಾಗಮಣಿ ಅವರಿಗೆ ಬಹುಮಾನ ವಿತರಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW