ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಶುಕ್ರವಾರ ಅಕ್ಟೋಬರ್ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಈ ಹಿಂದೆ ನೀಡಲಾಗಿದ್ದ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಯು ಸಂಜಯ್ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಸಂಜಯ್ ಸಿಂಗ್ ಅವರಿಗೆ ಜೈಲು ಶಿಕ್ಷೆ ವಿಧಿಸಿದರು. ಅಕ್ಟೋಬರ್ 4 ರಂದು ಜಾರಿ ನಿರ್ದೇಶನಾಲಯ (ಇಡಿ) ಸಿಂಗ್ ಅವರನ್ನು ಬಂಧಿಸಿತ್ತು. ಅಕ್ಟೋಬರ್ 10 ರಂದು ನ್ಯಾಯಾಲಯವು ಅಕ್ಟೋಬರ್ 13 ರವರೆಗೆ ಮೂರು ದಿನಗಳ ಕಾಲ ಇಡಿ ಬಂಧನವನ್ನು ವಿಸ್ತರಿಸಿತ್ತು.


