ತುಮಕೂರು: ಲಂಚ ಪಡೆಯುತ್ತಿದ್ದ ಸಮಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆ (ಜಾರಿ ವಿಭಾಗ-2) ಅಧಿಕಾರಿ ವಿ.ಕೆ.ಮಂಜುನಾಥ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಸೋಮವಾರ ಜಿ.ಮಂಜುನಾಥರೆಡ್ಡಿ ಅವರಿಂದ ₹40 ಸಾವಿರ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ವಿ.ಕೆ. ಮಂಜುನಾಥ ಅವರನ್ನು ಹಣದ ಸಹಿತ ವಶಕ್ಕೆ ಪಡೆದಿದ್ದಾರೆ.
ಪೆಪ್ಲಿ ವಿತರಣೆ ಏಜೆನ್ಸಿ ಹೊಂದಿರುವ ಜಿ.ಮಂಜುನಾಥರೆಡ್ಡಿ ಎಪಿಎಂಸಿ ಯಾರ್ಡ್ ನಲ್ಲಿ ದಾಸ್ತಾನು ಮಳಿಗೆ ಹೊಂದಿದ್ದಾರೆ. ಡಿಸೆಂಬರ್ 26ರಂದು ಸ್ಥಳಕ್ಕೆ ಭೇಟಿ ನೀಡಿದ್ದ ವಿ.ಕೆ.ಮಂಜುನಾಥ ತಪಾಸಣೆ ನಡೆಸಿ, ಕೆಲವು ದಾಖಲೆಗಳನ್ನು ಪರಿಶೀಲಿಸಿದ ನಂತರ ತಪಾಸಣೆ ನಡೆಸಿ, ಕೆಲವು ದಾಖಲೆಗಳನ್ನು ಪರಿಶೀಲಿಸಿದ ನಂತರ ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ನಲ್ಲಿ ಕೇಳಿರುವ ವಿವರಗಳಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಅಧಿಕಾರಿಗೆ ಸಲ್ಲಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿ ₹7 ಲಕ್ಷ ಜಿಎಸ್ಟಿ ಕಟ್ಟುವಂತೆ ಸೂಚಿಸಿದ್ದರು. ಹಣ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರು. ಕೊನೆಗೆ ಮಾತುಕತೆ ನಡೆದು ಜಿಎಸ್ಟಿ ಮೊತ್ತವನ್ನು ಕಡಿಮೆ ಮಾಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಜುನಾಥರೆಡ್ಡಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಕಚೇರಿಯಲ್ಲಿ ಲಂಚದ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ವಿಚಾರಣೆ ನಂತರ ಆರೋಪಿ ವಿ.ಕೆ.ಮಂಜುನಾಥ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವಲಿಬಾಷಾ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಿ.ಉಮಾಶಂಕರ್, ಕೆ.ಜಿ.ರಾಮಕೃಷ್ಣ ನೇತೃತ್ವದಲ್ಲಿ ದಾಳಿ ನಡೆಯಿತು. ಪೊಲೀಸ್ ಇನ್ಸ್ಪೆಕ್ಟರ್ ರಾಮರೆಡ್ಡಿ, ಸಿಬ್ಬಂದಿಗಳಾದ ಯತೀಗೌಡ, ಪಿ.ನಾಗರಾಜು, ಪ್ರಕಾಶ್, ರವೀಶ್, ಭಾಸ್ಕರ್, ನಳಿನಾಕ್ಷಿ, ಯಶೋದ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


