ತುಮಕೂರು: ಅರೆಕಾಲಿಕ (ಪಾರ್ಟ್‌ಟೈಮ್) ಕೆಲಸದ ಆಮಿಷಕ್ಕೆ ಒಳಗಾಗಿ ನಗರದ ಎಸ್ ಐಟಿ ಬಡಾವಣೆಯ ಮಹಿಳಾ ವೈದ್ಯೆಯೊಬ್ಬರು ಬರೋಬ್ಬರಿ ₹4,01,500 ಹಣವನ್ನು ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.
ನಗರದ ಎಸ್ ಐಟಿ ಬಡಾವಣೆಯ ನಿವಾಸಿಯಾದ ವೈದ್ಯೆ ಜಿ.ಯು. ಲಕ್ಷ್ಮಿನಾಗವಣಿ ವಂಚನೆಗೊಳಗಾದ ದುರ್ದೈವಿ. ಅಪರಿಚಿತ ಆರೋಪಿಗಳು ಲಕ್ಷ್ಮಿನಾಗವಣಿ ಅವರನ್ನು ಟೆಲಿಗ್ರಾಮ್ ಆ್ಯಪ್ ಮೂಲಕ ಸಂಪರ್ಕಿಸಿ, ಪಾರ್ಟ್‌ಟೈಮ್ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಹಣ ನೀಡುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ಲಕ್ಷ್ಮಿ ಅವರು ಮೊದಲಿಗೆ ₹800 ವರ್ಗಾಯಿಸಿದ್ದು, ಅದಕ್ಕೆ ಪ್ರತಿಯಾಗಿ ಆರೋಪಿಗಳು ಅವರ ಖಾತೆಗೆ ₹1,040 ಜಮಾ ಮಾಡಿದ್ದಾರೆ. ಎರಡನೇ ಬಾರಿ ₹1,050 ವರ್ಗಾವಣೆ ಮಾಡಿದಾಗ ₹2,000 ಹಿಂದಿರುಗಿಸಿ ನಂಬಿಕೆ ಹುಟ್ಟಿಸಿದ್ದಾರೆ.
ಇದಾದ ಬಳಿಕ, “ಇದೇ ರೀತಿಯಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿ, ನಾವು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ದುಪ್ಪಟ್ಟು ಹಣ ನೀಡಲಾಗುವುದು” ಎಂದು ಆರೋಪಿಗಳು ಆಮಿಷ ಒಡ್ಡಿದ್ದಾರೆ. ಇದನ್ನು ನಿಜವೆಂದು ನಂಬಿದ ವೈದ್ಯೆ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹4,01,500 ವರ್ಗಾಯಿಸಿದ್ದಾರೆ.
ಹಣ ವರ್ಗಾವಣೆಯಾದ ನಂತರ, ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು 3 ಟಾಸ್ಕ್‌ಗಳನ್ನು ಪೂರ್ಣಗೊಳಿಸಬೇಕು ಎಂದು ಆರೋಪಿಗಳು ಶರತ್ತು ವಿಧಿಸಿದ್ದಾರೆ. ಲಕ್ಷ್ಮಿ ಅವರು ಮಾಡಿದ 2 ಟಾಸ್ಕ್‌ಗಳು ತಪ್ಪಾಗಿವೆ ಎಂದು ಹೇಳಿದ ವಂಚಕರು, ಹಣ ಹಿಂಪಡೆಯಲು ಇನ್ನೂ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಆರೋಪಿಗಳು ಪದೇ ಪದೇ ಹಣಕ್ಕಾಗಿ ಒತ್ತಾಯಿಸುತ್ತಿರುವುದನ್ನು ಕಂಡು ಅನುಮಾನಗೊಂಡ ಲಕ್ಷ್ಮಿನಾಗವಣಿ ಅವರು ತಾವು ವಂಚನೆಗೊಳಗಾಗಿರುವುದನ್ನು ಅರಿತಿದ್ದಾರೆ. ತಕ್ಷಣವೇ ಅವರು ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕಳೆದುಹೋದ ಹಣವನ್ನು ವಾಪಸ್ ಕೊಡಿಸುವಂತೆ ವೈದ್ಯೆ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


