ಲೈಂಗಿಕ ದೌರ್ಜನ್ಯ ಎಸಗಿ ಒಂದು ವರುಷದ ಮಗುವನ್ನು ಕೊಲೆ ಮಾಡಿದ ಅಪರಾಧಿ ಯಶವಂತಪುರದ ನಿವಾಸಿ ಮೂರ್ತಿ ಅಲಿಯಾಸ್ ಹಲ್ಲುಜ್ಜನಿಗೆ (25) ತ್ವರಿತಗತಿಯ ವಿಶೇಷ ನ್ಯಾಯಾಲಯವು (ಎಫ್‌ಟಿಎಸ್‌ಸಿ) ಮರಣ ದಂಡನೆ ವಿಧಿಸಿದೆ.
ಮೃತ ಮಗುವಿನ ಕುಟುಂಬಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ (ಡಿಎಲ್‌ಎಸ್‌ಎ) 5 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಧೀಶೆ ಕೆ.ಎನ್.ರೂಪಾ ಆದೇಶಿಸಿದ್ದಾರೆ.
ಘಟನೆ ನಡೆದ ಮರು ದಿನವೇ ರಾಜಗೋಪಾಲನಗರ ಠಾಣೆಯ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದರು. ಆಗ ಅಪರಾಧಿಗೆ 18 ವರ್ಷವಾಗಿತ್ತು. ಅಪರಾಧಿ ಮೂರ್ತಿ ಕೊಲೆಯಾದ ಮಗುವಿನ ತಂದೆಯ ಪರಿಚಯಸ್ಥ. 2015ರ ಸೆ.12ರಂದು ಮಧ್ಯಾಹ್ನ ಉಲ್ಲಾಸ್ ಚಿತ್ರಮಂದಿರದ ಬಳಿ ಮಗುವಿನ ತಂದೆಗೆ ಮೂರ್ತಿ ಸಿಕ್ಕಿದ್ದ. ಮಗುವಿಗೆ ತಿಂಡಿ ಕೊಡಿಸಲು ಮೂವರು ರಾಜಗೋಪಾಲ ನಗರದ ಮುಖ್ಯರಸ್ತೆಗೆ ತೆರಳಿದ್ದರು. ತಿಂಡಿ ತರುವವರೆಗೆ ಮಗುವನ್ನು ನೋಡಿಕೊಳ್ಳುವಂತೆ ಮೂರ್ತಿಗೆ ತಿಳಿಸಿದ್ದ ತಂದೆ ರಸ್ತೆಯ ಪಕ್ಕದಲ್ಲೇ ನಿಲ್ಲಿಸಿದ್ದರು. ತಿಂಡಿ ತರುವಷ್ಟರಲ್ಲಿ ಮಗುವನ್ನು ಮೂರ್ತಿ ಕರೆದೊಯ್ದಿದ್ದ.
ಆಟೊದಲ್ಲಿ ಗೊರಗುಂಟೆಪಾಳ್ಯದ ಏರ್‌ಫೋರ್ಸ್‌ನ ಮುಖ್ಯ ಎಂಜಿನಿಯರ್‌ಕಚೇರಿಯ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಬಾಯಿ ಮುಚ್ಚಿ ಲೈಂಗಿಕ ದೌಜನ್ಯವೆಸಗಿದ್ದ. ಮಗು ಅಳಲು ಆರಂಭಿಸಿದ ಮೇಲೆ ಯಾರಾದರೂ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ ಎನ್ನುವ ಭಯದಿಂದ ಬೆಂಕಿ ಹಚ್ಚಿದ್ದ. ಸಿಮೆಂಟ್‌ಮೌಲ್ಡ್‌ಅನ್ನು ಮಗುವಿನ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದ ಎಂಬುದು ವಿಚಾರಣೆಯಲ್ಲಿ ಬಯಲಾಗಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy