ಬೆಂಗಳೂರು: ಬಹುದಿನಗಳ ಕನಸಿನ ಯೋಜನೆಯಾದ ಮಾದಾವರ-ತುಮಕೂರು ಮೆಟ್ರೋ (Madavara – Tumakuru Metro) ರೈಲು ವಿಸ್ತರಣಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸವಿಸ್ತಾರ ಯೋಜನಾ ವರದಿ (DPR) ಸಲ್ಲಿಕೆಯಾಗಿದೆ.
ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಡಿಪಿಆರ್ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈ ಡಿಪಿಆರ್ ಅನ್ನು ಸಿದ್ಧಪಡಿಸಿದೆ.
20 ಸಾವಿರ ಕೋಟಿ ರೂ. ವೆಚ್ಚದ ಯೋಜನೆ:
ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, “ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಬಹಳ ದಿನಗಳಿಂದ ಪ್ರಯತ್ನಗಳು ನಡೆಯುತ್ತಿದ್ದವು. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಫೀಸಿಬಿಲಿಟಿ (ಸಾಧ್ಯತಾ) ಅಧ್ಯಯನ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 3.5 ಕೋಟಿ ರೂ. ವೆಚ್ಚ ಮಾಡಿ ಅಧ್ಯಯನ ನಡೆಸಲು ಜವಾಬ್ದಾರಿ ನೀಡಲಾಗಿತ್ತು. ಆ ವರದಿಯಲ್ಲಿ ಮಾದಾವರದಿಂದ ತುಮಕೂರಿಗೆ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತ ಮತ್ತು ಸಾಧ್ಯ ಎಂದು ತಿಳಿಸಲಾಗಿತ್ತು,” ಎಂದರು.
ಮುಂದುವರಿದು ಮಾತನಾಡಿದ ಅವರು, “ಸಾಧ್ಯತಾ ವರದಿ ಬಂದ ನಂತರ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ನೀಡಲಾಗಿತ್ತು. ಬಿಎಂಆರ್‌ಸಿಎಲ್ ಮತ್ತೊಂದು ಸಂಸ್ಥೆಯ ಮೂಲಕ ಈ ವರದಿಯನ್ನು ಸಿದ್ಧಪಡಿಸಿಕೊಟ್ಟಿದೆ. ಈ ಮೆಟ್ರೋ ಯೋಜನೆಯನ್ನು ಪಿಪಿಪಿ (ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ – PPP Model) ಮಾದರಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಡಿಪಿಆರ್‌ನಲ್ಲಿ ಯೋಜನೆಗೆ ಸುಮಾರು 20,000 ಕೋಟಿ ರೂ. ಅಂದಾಜು ವೆಚ್ಚವನ್ನು ಹಾಕಲಾಗಿದೆ,” ಎಂದು ಮಾಹಿತಿ ನೀಡಿದರು.
ಮುಂದಿನ ಸಚಿವ ಸಂಪುಟ (Cabinet) ಸಭೆಯಲ್ಲಿ ಈ ಮಾದಾವರ-ತುಮಕೂರು ಮೆಟ್ರೋ ರೈಲು ಯೋಜನೆಯ ಡಿಪಿಆರ್ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ. ಸಂಪುಟ ಸಭೆಯ ಅನುಮೋದನೆ ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಂಡು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


