ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕೆಂಚನಪಾಳ್ಯ ಗ್ರಾಮದ ಉತ್ಸಾಹಿ ತರುಣರಾದ ಸೋಮಶೇಖರ್ ಮತ್ತು ರಾಮಕೃಷ್ಣ ಎಂಬ ನನ್ನ ವಿದ್ಯಾರ್ಥಿ ಮಿತ್ರರು ತಮ್ಮ ಗ್ರಾಮದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗಾಗಿ ‘ಮಹಾನಾಯಕ ಭೀಮ ಗ್ರಂಥಾಲಯ’ ಸ್ಥಾಪಿಸಿರುತ್ತಾರೆ. ‘ಭಾರತದ ಸಂವಿಧಾನ’ ಎಂಬ ಕಿರುಚಿತ್ರ ತಯಾರಿಸಲು ಸಿದ್ಧತೆ ನಡೆಸಿರುವ ಈ ಯುವಕರು ಬುದ್ಧಧ್ಯಾನ ಮಂದಿರವನ್ನು ಸ್ಥಾಪಿಸುವ ಕನಸು ಹೊತ್ತಿದ್ದಾರೆ.
ನಿನ್ನೆದಿನ ಸಾಹಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಪ್ರಸನ್ನ (ಮಂಜು ಕೋಡಿಉಗುನೆ), ನಾಟಕಕಾರ, ಸಂಸ್ಕೃತಿ ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ.ಬಾಲಗುರುಮೂರ್ತಿ, ಪಪೂಶಿಇ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀರಂಗಾಚಾರಿ ಆರ್, ಸಂಶೋಧಕ- ವಿಮರ್ಶಕರಾದ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಹಾಗೂ ನನ್ನ ಹೆಂಡತಿ ಎಂಬ ಫ್ರೆಂಡತಿ ರಮಾಶಾಕ್ಯ ನಾವೆಲ್ಲರೂ ಕೆಂಚನಪಾಳ್ಯದ ‘ಮಹಾನಾಯಕ ಭೀಮ ಗ್ರಂಥಾಲಯ’ಕ್ಕೆ ಭೇಟಿ ನೀಡಿದ್ದೆವು.
ಗ್ರಂಥಾಲಯವನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಮತ್ತು ನಿತ್ಯ ನಿರ್ವಹಣೆ ಮಾಡಲು ಅನುಕೂಲ ಒದಗಿಸಲು ಬಯಸುವ ಸಹೃದಯಿಗಳು ನನ್ನ ವಿದ್ಯಾರ್ಥಿ ಮಿತ್ರರು ರೂಪಿಸಿರುವ ಈ ಗ್ರಂಥಾಲಯಕ್ಕೆ ತಮ್ಮಿಂದ ಸಾಧ್ಯವಾದಷ್ಟು ಪುಸ್ತಕಗಳನ್ನು, ಕಪಾಟು ಅಥವಾ ಬೀರುಗಳನ್ನು, ಪೀಠೋಪಕರಣ ಮುಂತಾದ ಸರಕು ಸೇವೆಗಳನ್ನು ಒದಗಿಸಿ ನೆರವಾಗಬೇಕೆಂದು ವಿನಂತಿಸುತ್ತೇನೆ.
‘ಒಂದು ದೇವಾಲಯವನ್ನು ನಿರ್ಮಿಸುವುದರಿಂದ ಒಂದು ಸಾವಿರ ಭಿಕ್ಷುಕರು ಹುಟ್ಟುತ್ತಾರೆ. ಆದರೆ ಒಂದು ಗ್ರಂಥಾಲಯವನ್ನು ಕಟ್ಟುವುದರಿಂದ ಒಂದು ಲಕ್ಷ ಜನ ಪ್ರಜ್ಞಾವಂತರು ರೂಪುಗೊಳ್ಳುತ್ತಾರೆ’ ಎಂಬ ಅಂಬೇಡ್ಕರ್ ಅವರ ಮಾತನ್ನು ನಡೆಯಾಗಿಸಿಕೊಂಡಿರುವ ರಾಮಕೃಷ್ಣ ಮತ್ತು ಸೋಮಶೇಖರ್ ಅವರ ಪ್ರಯತ್ನಗಳೊಂದಿಗೆ ಕೈಜೋಡಿಸೋಣ
ಸಂಪರ್ಕ: ರಾಮಕೃಷ್ಣ 9740307657
ಸೋಮಶೇಖರ್: 7760378358
ಕೆಂಚನಪಾಳ್ಯ, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು