ಗುಬ್ಬಿ: ನೆಲ ಮತ್ತು ಜಲವನ್ನು ನಾವು ಸಂರಕ್ಷಣೆ ಮಾಡಿದರೆ, ನಮ್ಮನ್ನು ಈ ಪ್ರಕೃತಿ ಸಂರಕ್ಷಣೆ ಮಾಡುತ್ತದೆ. ನೀರನ್ನು ಮಿತವಾಗಿ ಬಳಸಿ ಅಂತರ್ಜಲವನ್ನು ಕಾಪಾಡುವ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ನೀರನ್ನು ಕೃತಕವಾಗಿ ತಯಾರಿಸಲು ಆಗುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಕೆರೆ ಹೇಮೆಯಿಂದ ತುಂಬಿ ಹರಿದ ಹಿನ್ನಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ಮುತ್ಸದ್ಧಿ ದೇವೇಗೌಡರ ನಿರೀಕ್ಷೆಯಂತೆ ನೀರು ಈ ಜಿಲ್ಲೆಗೆ ಸಿಗಲಿಲ್ಲ. ಇದಕ್ಕೆ ತಕ್ಕ ಉತ್ತರ ಜನರು ನೀಡಿದ್ದರು. ಆದರೆ ನೀರು ಹರಿಸುವ ಜವಾಬ್ದಾರಿ ನನ್ನ ಹೆಗಲಿಗೆ ಬಿತ್ತು. ಈ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಜಿಲ್ಲೆಗೆ ನೀರು ಹರಿಸುವ ಕೆಲಸ ನಿಯಾಮಾನುಸಾರ ನಡೆಸಿ ಮೂರು ಜಿಲ್ಲೆಗೆ ನ್ಯಾಯ ಒದಗಿಸಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹಾಸನದಿಂದ ತುಮಕೂರಿನತ್ತ ಹೇಮೆ ಹರಿಯುವ ವೇಳೆ ಸಾಕಷ್ಟು ಭಾಗದಲ್ಲಿ ನೀರು ವ್ಯರ್ಥವಾಗುವುದು. ಈ ನಿಟ್ಟಿನಲ್ಲಿ ಪೋಲಾಗುವ 38 ಕಡೆ ಗೇಟ್ ನಿರ್ಮಿಸಿ ನೀರು ಉಳಿಸುವ ಕೆಲಸ ಮಾಡಲಾಗುವುದು. ಅಮೂಲ್ಯ ವಸ್ತುಗಳಲ್ಲಿ ನೀರು ಪ್ರಮುಖ ಎನಿಸಿದೆ. ಇದರ ಬಳಕೆಯನ್ನು ಅರಿತು ಮಾಡಬೇಕಿದೆ. ನದಿ ನೀರು ಹರಿಸಿಕೊಳ್ಳುವ ಭರದಲ್ಲಿ ಸಾಕಷ್ಟು ವ್ಯರ್ಥವಾಗುವ ಬಗ್ಗೆ ಗಂಭೀರ ಚಿಂತನೆ ಮಾಡಿ, ಅಧಿಕಾರಿಗಳಿಗೆ ಸೂಚನೆ ನೀಡಿ ನಾಲೆಯಿಂದ ಪೋಲಾಗುವುದನ್ನು ತಡೆ ಹಿಡಿಯಬೇಕಿದೆ ಎಂದರು.
ನೆಲ ಮತ್ತು ಜಲ ಜನರಲ್ಲಿ ಬಾಂಧವ್ಯ ಬೆಸೆಯುತ್ತದೆ. ಹಳೇ ಮೈಸೂರು ಭಾಗದಲ್ಲಿ ನೀರಿನ ಮಹತ್ವ ಅರಿತು ಹೇಮೆ ಹರಿಸುವ ಯೋಜನೆ ಕಾರ್ಯರೂಪಕ್ಕೆ ಬಂತು. ತೀರ ಸಂಕಷ್ಟದಲ್ಲಿದ್ದ ತುಮಕೂರು ಜಿಲ್ಲೆಗೆ ಹೇಮಾವತಿ ಜೀವ ಜಲವಾಯಿತು. ಈ ನೀರು 7 ಲಕ್ಷ ಹೆಕ್ಟೇರ್ ಭೂಮಿ ಉಳಿಸುವ ಯೋಜನೆಯಾಗಿ ನಂತರದಲ್ಲಿ 5 ಲಕ್ಷಕ್ಕೆ ಸೀಮಿತವಾಯಿತು. ಈಗ 3.80 ಲಕ್ಷ ಹೆಕ್ಟೇರ್ ಗೆ ಮಾತ್ರ ಬಳಕೆಗೆ ಮುಡಿಪಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿಗೆ ನೀರು ಉಳಿಸಿ ಮಿಕ್ಕ ನೀರು ಕೃಷಿಗೆ ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಜತೆಗೆ ದೀರ್ಘಾವಧಿ ಬೆಳೆಗೆ ಕಡಿವಾಣ ಹಾಕಿ ಎರಡರಿಂದ ಮೂರು ತಿಂಗಳ ಬೆಳೆ ಬೆಳೆದುಕೊಳ್ಳಲು ರೈತರಲ್ಲಿ ಮನವಿ ಮಾಡಿದರು.
ಈ ಜತೆಗೆ ಬೋರ್ ವೆಲ್ ಗೆ ಸುರಿದ ಹಣ ಉಳಿಸಿಕೊಳ್ಳಲು ರೈತರಿಗೆ ನೀರು ಮತ್ತು ವಿದ್ಯುತ್ ನೀಡಿದರೆ ಸಾಕು. ತಮ್ಮ ಸ್ವಾಭಿಮಾನ ಬದುಕು ಕಟ್ಟಿ ಕೊಳ್ಳುತ್ತಾರೆ. ಈ ಕೆಲಸ ಮಾಡಿದ ಶಾಸಕ ಜಯರಾಮ್ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಿಕೊಳ್ಳಲು ಕರೆ ನೀಡಿದರು.
ಮಾಜಿ ಸಚಿವ ಎಸ್.ಶಿವಣ್ಣ ಮಾತನಾಡಿ, ಜಿಲ್ಲೆಗೆ ಭಗೀರಥ ರೀತಿ ಬಂದ ಮಾಧುಸ್ವಾಮಿ ಅವರು ಕೈಗೆತ್ತಿಕೊಂಡ ಯೋಜನೆಗಳು ಮುಂದಿನ ದಿನಗಳಲ್ಲಿ ಜಿಲ್ಲೆಗೆ ನೀರಿನ ಹಾಹಾಕಾರ ತಪ್ಪುತ್ತದೆ. ಭದ್ರ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗಳು ಜಿಲ್ಲೆಯಲ್ಲಿ ಸಾಕಾರಗೊಳ್ಳಲಿದೆ. ರಾಜಕಾರಣಕ್ಕೆ ದುರ್ಬಳಕೆಯಾಗಿದ್ದ ಹೇಮೆ ನೀರು ಸದ್ಬಳಕೆಯ ಬಗ್ಗೆ ಜನರಿಗೆ ತಿಳಿಸಿದ ಸಚಿವರ ಕಾನೂನು ಬದ್ಧ ಕೆಲಸ ಜನ ಮನ್ನಣೆ ಗಳಿಸಿದೆ ಎಂದರು.
ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ರಾಜಕೀಯ ಪುನರ್ಜನ್ಮ ನೀಡುವ ಕೆಲಸ ನೀರು ಹರಿಸುವುದಾಗಿದೆ. ಈ ಕೆಲಸಕ್ಕೆ ಸಚಿವ.ಮಾಧುಸ್ವಾಮಿ ಅವರ ಆಶೀರ್ವಾದ ಕಾರಣ. ನೂರರಷ್ಟು ಕೆರೆಕಟ್ಟೆಗಳು ಹೇಮೆಯಿಂದ ತುಂಬಿದೆ. ಮುಂದಿನ ದಿನದಲ್ಲಿ ನೀರು ಸರಾಗವಾಗಿ ಹರಿಯಲು ನಾಲೆ ಅಗಲೀಕರಣ ಯೋಜನೆಗೆ 1050 ಕೋಟಿ ರೂ ಮಂಜೂರಿಗೆ ಸಮ್ಮತಿಸಿದ್ದಾರೆ. ಈ ಹಿಂದೆ ಮಂಜೂರು ಮಾಡಿದ್ದ 650 ಕೋಟಿ ಪೈಪ್ ಲೈನ್ ಯೋಜನೆ ಕೈಬಿಟ್ಟು ನಾಲೆ ಮೂಲಕವೇ ಎಲ್ಲರಿಗೂ ನೀರು ನೀಡುವ ಕೆಲಸ ಮಾಡಿದರು. ಮುಂದೆ 2500 ಕ್ಯೂಸೆಕ್ಸ್ ನೀರು ನಾಲೆಯಲ್ಲಿ ಹರಿದು ಜಿಲ್ಲೆಗೆ ಸಾಕಷ್ಟು ನೀರು ಬರಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರಿಗೆ ಹಾಗೂ ಶಾಸಕರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಸಿ.ಕೆ.ರಾಮಮೂರ್ತಿ, ಗ್ರಾ.ಪಂ. ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷೆ ಮಂಜುಳ ರಘು, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಸಿದ್ದರಾಮಯ್ಯ, ಭಾನುಪ್ರಕಾಶ್, ಮಹೇಶ್, ಶಿವಲಿಂಗೇಗೌಡ, ಹಿಂಡಿಸ್ಕೆರೆ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ಸದಾಶಿವಕುಮಾರ್ ಇತರರು ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700