ತುಮಕೂರು: ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತುಮಕೂರನ್ನು ಬೆಂಗಳೂರಿನ ಭಾಗವಾಗಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಸರ್ಕಾರದ ಸಾಧನಾ ಸಮಾವೇಶದ ವೇದಿಕೆಯಲ್ಲಿ ಪ್ರಸ್ತಾಪಿಸಿ ಸಿಎಂ, ಡಿಸಿಎಂ ಅವರಲ್ಲಿ ಮನವಿ ಮಾಡಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕರ್ನಾಟಕ ಸರ್ಕಾರದ 3ನೇ ವರ್ಷದ ಸಾಧನ ಸಮಾವೇಶದಲ್ಲಿ ಮಾತನಾಡಿದ ಅವರು, ತುಮಕೂರು ಬೆಂಗಳೂರಿಗೆ ಕೇವಲ 60 ಕಿ.ಮೀ ದೂರವಿದೆ. ರಾಜಧಾನಿ ಜನದಟ್ಟಣೆ ನಿಯಂತ್ರಣ, ತುಮಕೂರು ಅಭಿವೃದ್ಧಿ ದೃಷ್ಟಿಯಿಂದ ತುಮಕೂರನ್ನು ಬೆಂಗಳೂರಿಗೆ ಸೇರಿಸಿ ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗೃಹಸಚಿವ ಪರಮೇಶ್ವರ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಸಚಿವ ಕೃಷ್ಣ ಬೈರೇಗೌಡ ಇದ್ದರು.
ಬೆಂಗಳೂರು ಬಿಟ್ಟರೆ ಸನಿಹದ ತುಮಕೂರಿಗೆ ಒಂದು ದೊಡ್ಡ ಇತಿಹಾಸ. ಶಿಕ್ಷಣ ಕಾಶಿ, ಕಲ್ಪತರು ನಾಡು, ಧಾರ್ಮಿಕ, ಐತಿಹಾಸಿಕ, ದಕ್ಷಿಣದ ಕಾಶಿಯಂತೆ ಕಂಗೊಳಿಸುತ್ತಿದೆ. ಅನ್ನ, ಅಕ್ಷರ, ಆಶ್ರಯ ನೀಡಿದಂತಹ ಒಂದು ಪವಿತ್ರವಾದಂತಹ ಭೂಮಿ. ಸಹೋದ್ಯೋಗಿ ಪರಮೇಶ್ವರ್ ಅವರು, ರಾಮನಗರವನ್ನು ಬೆಂಗಳೂರು ದಕ್ಷಿಣವಾಗಿಸಿದಂತೆ ಬೆಂಗಳೂರಿನ ಉತ್ತರ ಭಾಗದಲ್ಲಿ ಇರುವ ತುಮಕೂರನ್ನು ಎರಡನೇ ಬೆಂಗಳೂರಾಗಿ ಪರಿವರ್ತನೆ ಮಾಡಬೇಕು ಎಂದಿದ್ದಾರೆ. ಅವರ ಮಾತಿಗೆ ನನ್ನ ಬೆಂಬಲವಿದೆ.
— ಡಿ.ಕೆ.ಶಿವಕುಮಾರ್, ಡಿಸಿಎಂ.
ವಿಪಕ್ಷಗಳಿಗೆ ಟೀಕೆಗಳಿಗೆ 1.52 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸವಲತ್ತು, ಹಕ್ಕು ಪತ್ರ ವಿತರಿಸುತ್ತಿರುವ ಸರ್ಕಾರದ ಸಾಧನೆಯ ಈ ಸಮರ್ಪಣ ಸಮಾವೇಶವೇ ಉತ್ತರ ಎಂದು ಸಚಿವ ಪರಮೇಶ್ವರ್ ಅವರು 3 ಲಕ್ಷ ಕೋಟಿಯಿದ್ದ ರಾಜ್ಯದ ಬಜೆಟ್ ಅನ್ನು 4.30 ಲಕ್ಷ ಕೋಟಿಗೆ ಏರಿಕೆ ಮಾಡಿ ಪಂಚ ಗ್ಯಾರಂಟಿಗಳೊಂದಿಗೆ ಅಭಿವೃದ್ಧಿಗೂ ಹಣ ಮೀಸಲಿಟ್ಟಿದ್ದನ್ನು ವಿಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ. ಬಡವರ ಕಲ್ಯಾಣಕ್ಕಾಗಿ 2 ಲಕ್ಷ ಕೋಟಿ ವೆಚ್ಚ ಮಾಡಿರುವುದನ್ನು ಸಹಿಸಲಾಗದೆ ವಿಪಕ್ಷ ಬಿಜೆಪಿ ಶಾಸಕರು ಲಘುವಾಗಿ ಮಾತನಾಡಿದ್ದಾರೆ. ಅಸಹಿಷ್ಣುತೆಗೆ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿ ತುಮಕೂರು ಜಿಲ್ಲೆಯೊಂದರಲ್ಲೇ 22 ಸಾವಿರ ಕಂದಾಯ ಗ್ರಾಮಗಳ ಹಕ್ಕುಪತ್ರ ನೀಡಿರುವುದು ಗಿನ್ನಿಸ್ ದಾಖಲೆಯಾಗಿದೆ. 682 ಕೋಟಿ ವೆಚ್ಚದ ಕಾಮಗಾರಿಗೂ ಚಾಲನೆ ನೀಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಪ್ರಶಂಸಿಸಿದ್ದಾರೆ.
ಸಚಿವರ ಮನವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಹಮತ ವ್ಯಕ್ತಪಡಿಸಿ ಎರಡನೇ ಬೆಂಗಳೂರಾಗಿ ತುಮಕೂರು ಅಭಿವೃದ್ಧಿಗೆ ನನ್ನ ಸಹಮತ, ಬೆಂಬಲವಿದೆ ಎಂದರು. ಕಳೆದ ವರ್ಷವೂ ಪರಮೇಶ್ವರ್ ಅವರು ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ಸಾರ್ವಜನಿಕರು ಸಾಹಿತಿಗಳಿಂದ ವಿರೋಧ ವ್ಯಕ್ತವಾದ ಬಳಿಕ ಪ್ರಸ್ತಾಪವನ್ನು ಕೈಬಿಟ್ಟಿದ್ದರು. ಈಗ ಮತ್ತೆ ಪುನರುಚ್ಚರಿಸಿರುವ ಡಾ. ಜಿ. ಪರಮೇಶ್ವರ್ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಮತ್ತು ಡಿಸಿಎಂ ಅವರಲ್ಲಿ ಮನವಿ ಮಾಡಿದ್ದು, ಚರ್ಚೆಗೆ ಆಸ್ಪದ ಒದಗಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


