ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ತಿಪಟೂರು: ಪ್ರಪಂಚದಲ್ಲಿಯೇ ಮೊದಲ ವಿಶ್ವವಿದ್ಯಾಲಯ ಪ್ರಾರಂಭವಾಗಿದ್ದು ನಮ್ಮ ದೇಶದಲ್ಲೇ ( ನಳಂದ ವಿಶ್ವವಿದ್ಯಾಲಯ ಕ್ರಿ.ಶ. 427) ಎಂಬ ಹೆಗ್ಗಳಿಕೆ ಎಲ್ಲಾ ಭಾರತೀಯರಿಗು ಹೆಮ್ಮೆಯ ವಿಷಯ. ಆದರೆ ಇಂದಿನ ನಮ್ಮ ದೇಶದ ಕೆಲವು ಸರ್ಕಾರಿ ಶಾಲೆಗಳ ಕಟ್ಟಡಗಳ ಅವಸ್ಥೆಯನ್ನು ನೋಡಿ ಸ್ವತಃ ಭಾರತೀಯರಿಗೆ ನಾಚಿಕೆ ಆಗುತ್ತಿದೆ. ಇದಕ್ಕೆ ಕಾರಣ ಶಾಸಕಾಂಗವೋ, ಕಾರ್ಯಾಂಗವೋ ಇಲ್ಲ ಪ್ರಜೆಗಳೋ ಎಂಬ ಒಂದಕ್ಕೊಂದು ಸರಪಳಿ ಕಾರಣಗಳು ನಮ್ಮ ಕಣ್ಣೆದುರಿಗೆ ಕಾಣುತ್ತವೆ.
ತಿಪಟೂರು ತಾಲ್ಲೂಕಿನ ಕೋಟೆನಾಯಕನಹಳ್ಳಿಯ ಸರ್ಕಾರಿ “ಮಾದರಿ” ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ನೋಡಿದರೆ ಇಲ್ಲಿನ ಜನಪ್ರತಿನಿದಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಹೆಸರಲ್ಲಿ ಮಾತ್ರ ” ಮಾದರಿ ” ಎಂಬುದು ಕಾಣುತ್ತಿದೆ. ಆದರೆ, ಇಂತಹ ಅಪಾಯಕಾರಿ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ಕೊಟ್ಟ ಸರ್ಕಾರದ ನಡೆ ಮಾದರಿಯೇ? ಇಲ್ಲಿನ ಜನಪ್ರತಿನಿಧಿಗಳು ಮಾದರಿಯೇ ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ.
ಕೇವಲ 15 ವರ್ಷಗಳ ಹಿಂದೆ ಉದ್ಘಾಟನೆಯಾದ ಶಾಲಾ ಕಟ್ಟಡ ಇಂದು ಶಿಥಿಲಾವಸ್ಥೆ ತಲುಪಿದೆ. ಶಾಲೆಯ ಮೇಲ್ಛಾವಣಿಗಳು, ಕಿತ್ತು ಬಂದು ಒಂದೊಂದು ತುಂಡುಗಳು ವಿದ್ಯಾರ್ಥಿಗಳ ತಲೆಗೆ ಬೀಳುತ್ತಿವೆ. ಯಾವೊಬ್ಬ ಜನಪ್ರತಿನಿದಿಯಾಗಲೀ , ಅಧಿಕಾರಿಯಾಗಲೀ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಅರಿತು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕನಿಷ್ಠ ಪಕ್ಷ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎನ್ನುವ ಇಚ್ಛಾ ಶಕ್ತಿಯೂ ಅವರಿಗೆ ಇದ್ದಂತಿಲ್ಲ.
ಮೊದಲೇ ಹಾಜರಾತಿಯ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿದೆ. ಈ ಸಂದರ್ಭದಲ್ಲಿ ಇಂತಹ ಶಾಲಾ ಅವ್ಯವಸ್ಥೆಗಳಿಂದಾಗಿ ಸರ್ಕಾರಿ ಶಾಲೆಗಳು ಎಂದರೆ ಪೋಷಕರಿಗೆ ತಾತ್ಸರ ಮನೋಭಾವ ಉಂಟಾಗಿ ಖಾಸಗಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿವೆ ಎನ್ನುವುದು ವಾಸ್ತವವಾಗಿದೆ.
15 ವರ್ಷಗಳ ಹಿಂದೆ ಹೊಸ ಕಟ್ಟಡದಲ್ಲಿ ವ್ಯಾಸಂಗ ಮಾಡಿ ಹೋದ ಹಳೇ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಭೇಟಿ ಕೊಟ್ಟು ಇಲ್ಲಿನ ಅವ್ಯವಸ್ಥೆ ಕಂಡು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. “ಜ್ಞಾನ ದೇಗುಲ” ಎಂಬುದು ಶಾಲೆಗಳಿಗಿರುವ ಪರ್ಯಾಯ ಹೆಸರು. ಇಂತಹ ಜ್ಞಾನ ದೇಗುಲವನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಕೈ ಬಿಟ್ಟರೂ, ನಾವು ಬಿಡುವುದಿಲ್ಲ. ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳೆಲ್ಲರೂ ಸೇರಿಕೊಂಡು ಕಟ್ಟಡವನ್ನು ದುರಸ್ತಿಗೊಳಿಸುತ್ತೇವೆ. ಆದ್ದರಿಂದ ಹಳೇ ವಿದ್ಯಾರ್ಥಿಗಳು ಕೈ ಜೋಡಿಸಬೇಕು” ಎಂದು ಇಲ್ಲಿನ ಹಳೆಯ ವಿದ್ಯಾರ್ಥಿಗಳಾದ ಮೋಹನ್ ಮತ್ತು ಸ್ನೇಹಿತರು ತಮ್ಮ ನೋವನ್ನು ತೋಡಿಕೊಂಡರು.
ಜನರೇ ಶಾಲೆಗಳನ್ನು ಸರಿಪಡಿಸಿಕೊಳ್ಳುವುದಾದರೆ, ಜನಪ್ರತಿನಿಧಿಗಳ್ಯಾಕೆ? ಶಾಲೆಗಳ ಅವ್ಯವಸ್ಥೆಗಳನ್ನು ಕೇಳುವ ಯಾವುದೇ ವ್ಯವಸ್ಥೆಗಳಿಗೂ ಈ ಶಾಲೆ ಇಲ್ಲೂ ಕಂಡಿಲ್ಲವೇ? ಎನ್ನುವ ಪ್ರಶ್ನೆಗಳನ್ನು ಇಲ್ಲಿನ ಗ್ರಾಮಸ್ಥರು ಕೇಳುತ್ತಿದ್ದಾರೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವುದರತ್ತ ತಮ್ಮ ಸಹಕಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700