ಬೆಂಗಳೂರು, ಸೆಪ್ಟೆಂಬರ್ 05: ಬೆಂಗಳೂರಿನಲ್ಲಿ ಹಲವು ದಿನಗಳಿಂದ ನಿತ್ಯ ತೀವ್ರ ಮಳೆ ಸುರಿಯುತ್ತಿದ್ದು ಸಂಚಾರ ವ್ಯವಸ್ಥೆ ತೀರ ಹದಗೆಟ್ಟಿದೆ. ನಿನ್ನೆ ರಾತ್ರಿಯಿಂದ ಬೆಳಗಿನ ಜಾವದವರೆಗೆ ಎಡಬಿಡದೆ ಸುರಿದ ಮಳೆಯಿಂದಾಗಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಇದರಿಂದಾಗಿ ಜನ ಕಚೇರಿಗಳಿಗೆ ತೆರಳಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಲ್ಲಿ ಸಂಚಾರ ಸಾಧ್ಯವಾಗದೇ ವಾಹನಗಳು ನಿಂತಿರುವುದು ಹಾಗೂ ನೀರಿನಲ್ಲಿ ತಳ್ಳುತ್ತಿರುವ ದೃಶ್ಯಗಳು ಕಂಡುಬಂದಿದೆ.
ಇಂದು ಬೆಳಗ್ಗೆ ಬೆಂಗಳೂರಿನ ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯಲ್ಲಿ ತೀವ್ರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡ ದೃಶ್ಯಗಳು ಕಂಡು ಬಂದಿವೆ. ಮಾತ್ರವಲ್ಲದೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿರುವುದು ಕಂಡುಬಂದಿದೆ. ವಾಹನ ಸವಾರರು ನಿಗದಿತ ಸಮಯಕ್ಕೆ ಕಚೇರಿಗಳಿಗೆ ತೆರಳಾಗದೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.
ಇನ್ನೂ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಮಾನ ನಿಲ್ದಾಣದಲ್ಲಿ ಮಳೆ ನೀರು ಹರಿವು ಹೆಚ್ಚಾದ್ದರಿಂದ ಪ್ರಯಾಣಿಕರು ಮನೆಗಳಿಗೆ ಹಾಗೂ ವಿಮಾನ ನಿಲ್ದಾಣಕ್ಕೆ ತೆರಳು ತೊಂದರೆ ಅನುಭವಿಸಿದ್ದಾರೆ. ವಿಮಾನನಿಲ್ದಾಣದಲ್ಲಿ ಮಳೆ ನೀರು ಹರಿಯುತ್ತಿರುವ ದೃಶ್ಯಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರು, ಪುಟ್ಟ ಮಕ್ಕಳು ಸಮೇತ ಲಗೇಜ್‌ಗಳನ್ನು ಹಿಡಿದುಕೊಂಡು ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ದೃಶ್ಯಗಳು ಕಂಡುಬಂದಿವೆ. ‘ಭಾರತದ ಇನ್‌ಫ್ರಾ ಸ್ಥಿತಿಯನ್ನು ನೋಡಿ ನನಗೆ ಅಳು ಬರುತ್ತಿದೆ’ ಎಂದು ವಿಡಿಯೋ ಹಂಚಿಕೊಂಡ ವ್ಯಕ್ತಿಯೊಬ್ಬ ಬರೆದಿದ್ದಾರೆ.
ಔಟರ್ ರಿಂಗ್ ರೋಡ್‌ನಲ್ಲಿ ರಸ್ತೆಗಳು ಜಲಾವೃತಗೊಂಡ ದೃಶ್ಯಗಳು ವೈರಲ್ ಆಗಿವೆ. ರಸ್ತೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರು ನಿಂತಿದ್ದು ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ದೃಶ್ಯದಲ್ಲಿ ಕಾರೊಂದನ್ನು ತಳ್ಳುತ್ತಿರುವುದು ಕಾಣಬಹುದು. ಜೊತೆಗೆ ಟೋಲ್ ಬಳಿ ಬಸ್ ಇತರ ವಾಹನಗಳು ಮುಂದೆ ಸಾಗದೇ ನಿಂತಿರುವುದನ್ನು ಕಾಣಬಹುದು. ಸೆಪ್ಟೆಂಬರ್ 9ರ ತನಕ ನಗರದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


