ಕೊರಟಗೆರೆ : ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಆರೋಪಿಗೆ ಮಧುಗಿರಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರರವರು ಜೀವಾವಧಿ ಶಿಕ್ಷೆ ಮತ್ತು ರೂ. 1ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆ ಮೊ.ಸಂಖ್ಯೆ 56/2021 , ಎಸ್.ಸಿ. 5023/2021 ರ ಪ್ರಕರಣದಲ್ಲಿ ತಾಲೂಕಿನ ಸಿ.ಎನ್.ದುರ್ಗ ಹೋಬಳಿ ಥರಟಿ ಗ್ರಾಮದಲ್ಲಿ ಹನುಮಯ್ಯರವರ ಮಗಳು ದಿನಾಂಕ :10—03–2021ರಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆರೋಪಿಯಾದ ದೇವರಾಜು ಬಿನ್ ಗೋವಿಂದಪ್ಪ , (49 ವರ್ಷ) ಥರಟಿ ಗ್ರಾಮದವನಾಗಿದ್ದು, ಈತನು ತನ್ನ ಹೆಂಡತಿಯಾದ ಯಶೋಧರವರ ಮೇಲೆ ಸಂಸಾರದ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡಿ ಹಾಗೂ ತುಮಕೂರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವ ವಿಚಾರದಲ್ಲಿ ಅನುಮಾನ ಪಟ್ಟು ತನ್ನ ಹೆಂಡತಿಯಾದ ಯಶೋಧ ರವರನ್ನು ಏನಾದರೂ ಮಾಡಿ ಕೊಲೆ ಮಾಡಿ ನಂತರ ಬೇರೆ ಮದುವೆಯಾಗಬೇಕೆಂಬ ಉದ್ದೇಶವಿಟ್ಟುಕೊಂಡು ಕೊಲೆ ಮಾಡುವ ಉದ್ದೇಶದಿಂದ, ಯಶೋಧರವರ ಬಲಭಾಗದ ತಲೆಗೆ 3–4 ಬಾರಿ ಮಚ್ಚಿನಿಂದ ಬಲವಾಗಿ ಹೊಡೆದಿದ್ದು, ಪರಿಣಾಮವಾಗಿ ಬಲ ಭಾಗದ ತಲೆಗೆ, ಬಲಕಿವಿಗೆ ಮತ್ತು ಬಲಭಾಗದ ಹಿಂಭಾಗದ ಕುತ್ತಿಗೆಗೆ ಏಟು ಬಿದ್ದು ತೀವ್ರ ಸ್ವರೂಪದ ರಕ್ತಗಾಯವಾಗಿತ್ತು.
ಗಾಯಗೊಂಡಿದ್ದ ಯಶೋಧ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆ , ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ , ನಿಮಾನ್ಸ್ ಆಸ್ಪತ್ರೆ , ಪೀಪಲ್ ಟ್ರೀ ಆಸ್ಪತ್ರೆ , ಕಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ಮತ್ತೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : 14–04–2021 ರಂದು ರಾತ್ರಿ 8:40 ಗಂಟೆ ಸಮಯದಲ್ಲಿ ಕೊನ್ನಯ್ಯರಹಟ್ಟಿ, ಟಿ.ಬೇಗೂರು , ವಾಸಿ ಹನುಮಯ್ಯರವರ ಮಗಳಾದ ಯಶೋಧರವರು ಮೃತಪಟ್ಟ ಬಗ್ಗೆ ಅಂದಿನ ಸಿ.ಪಿ.ಐ ಸಿದ್ದರಾಮೇಶ್ವರ ಎಸ್. ರವರು ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಾದವ ಕರಕೇರರವರು ದಿನಾಂಕ 9–4–2025 ರಂದು ಆರೋಪಿ ದೇವರಾಜನಿಗೆ ಭಾರತೀಯ ದಂಡ ಸಂಹಿತೆಯ ಕಲಂ 302 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ರೂ. ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ದಂಡದ ಪೂರ ಹಣವನ್ನು ಮೃತಳ ಮಕ್ಕಳಾದ ಅಕ್ಷತಾ ಮತ್ತು ಲಿಖಿತ್ ಇವರುಗಳಿಗೆ ಪರಿಹಾರವಾಗಿ ನೀಡಲು ಆದೇಶಿಸಿರುತ್ತಾರೆ. ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ.ನಿರಂಜನಮೂರ್ತಿ, ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————