ಮಧುಗಿರಿ: ತಾಲೂಕಿನ ಕಸಬಾ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಶೆಟ್ಟಿ ಹಳ್ಳಿ ಹಾಗೂ ದೊಡ್ಡಮಾಲೂರು ಗ್ರಾಮಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳೇ ಇಲ್ಲದೇ ಜನರು ಸಂಕಷ್ಟಕ್ಕೀಡಾಗಿದ್ದು, ಇಲ್ಲಿನ ಜನರು ವಾಸವಿರುವ ಮನೆಯ ಮುಂದೆಯೇ ಕೊಳಚೆ ನೀರು ಹರಿಯುತ್ತಿದ್ದು, ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿದ್ದು, ಇಲ್ಲಿ ಸಣ್ಣ ಮಕ್ಕಳು ಬರಿಗಾಲಿನಲ್ಲಿಯೇ ಆಟವಾಡುತ್ತಾ ಹೋಗುತ್ತಿರುತ್ತಾರೆ. ಸೊಳ್ಳೆ, ನೊಣಗಳ ಕಾಟವಂತೂ ಹೇಳತೀರದು. ಈ ಭಾಗದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ರೀತಿಯ ಸಮಸ್ಯೆ ತಲೆದೋರಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಮಧುಗಿರಿ ತಾಲ್ಲೂಕು ಕಸಬಾ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಶೆಟ್ಟಿಹಳ್ಳಿ ಹಾಗೂ ದೊಡ್ಡಮಾಲೂರು ಗ್ರಾಮಗಳ ಈ ಕಣಿವೆಗಳನ್ನು ಸರಿಪಡಿಸಲು ಸ್ಥಳೀಯ ಅಧಿಕಾರಿಗಳು ಸುಮಾರು ಐದು ವರ್ಷಗಳಿಂದ ಅನುದಾನವಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ದಯಮಾಡಿ ಮಧುಗಿರಿ ತಾ.ಪಂ EO ಹಾಗೂ ತುಮಕೂರು ಸಮಾಜ ಕಲ್ಯಾಣ ಇಲಾಖೆಯ JD/DDರವರು ತುರ್ತಾಗಿ ಸಮಸ್ಯೆ ಬಗೆ ಹರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಭಾರತ ಇಂದು ಡಿಜಿಟಲ್ ಇಂಡಿಯಾದ ಕನಸಿನಲ್ಲಿದೆ. ಆದರೆ, ಕೆಲವು ಜಾತಿಗಳನ್ನು ಗುರಿ ಮಾಡಿ, ಅಲ್ಲಿ ಕನಿಷ್ಠ ಚರಂಡಿ ವ್ಯವಸ್ಥೆಗಳನ್ನೂ ಮಾಡಿಕೊಡದೇ, ಮೂಲಭೂತ ಸೌಲಭ್ಯಗಳಿಂದ ವಂಚಿಸುತ್ತಿರುವ ಪ್ರವೃತ್ತಿಯ ಅಧಿಕಾರಿಗಳ ವಿರುದ್ಧ ಇದೀಗ ಆಕ್ರೋಶ ಕೇಳಿ ಬಂದಿದ್ದು, ಈ ಸಮಸ್ಯೆಯನ್ನು ಸಂಬಂಧ ಪಟ್ಟವರು ತಕ್ಷಣವೇ ಸರಿಪಡಿಸಬೇಕು ಇಲ್ಲವಾದರೆ, ಈ ತಾರತಮ್ಯಗಳ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700