ಸರಗೂರು: ತಾಲೂಕಿನ ಮೊಳೆಯೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ರೈತರೊಬ್ಬರನ್ನು ಬಲಿ ಪಡೆದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಗಂಡು ಹುಲಿಯನ್ನು ಹೊಸಕೋಟೆ ಗ್ರಾಮದ ಟ್ರಂಚ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಸಂಜೆ ಯಶಸ್ವಿಯಾಗಿ ಸೆರೆಯಾಗಿದೆ.
ತಾಲೂಕಿನಲ್ಲಿ ಒಂದು ತಿಂಗಳಿಂದ ಜನರ ನಿದ್ದೆಗೆಡಿಸಿದ ನರಭಕ್ಷಕ ಹುಲಿ ಕಳೆದ ವಾರ ಕೂಡಗಿ ಗ್ರಾಮದ ದೊಡ್ಡನಿಂಗಯ್ಯ ಎಂಬ ರೈತನ ಮೇಲೆ ದಾಳಿ ಮಾಡಿ ಕೊಂದಿದ್ದ ಸುಮಾರು 9 ವರ್ಷದ ಈ ಹುಲಿಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆಯು ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಶನಿವಾರ ಸಂಜೆ ಮೊಳೆಯೂರು ವಲಯದಲ್ಲಿ ಹುಲಿಯ ಇರುವಿಕೆಯನ್ನು ಖಚಿತಪಡಿಸಿಕೊಂಡ ಸಿಬ್ಬಂದಿ, ಅದಕ್ಕೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ಬೋನಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆಸಿಕ್ಕ ಹುಲಿಯ ಕುತ್ತಿಗೆಯ ಭಾಗದಲ್ಲಿ ಆಳವಾದ ಗಾಯವಾಗಿದ್ದು, ಬಹುಶಃ ಉರುಳಿಗೆ ಸಿಲುಕಿ ಈ ಗಾಯವಾಗಿರಬಹುದು ಎಂದು ಶಂಕಿಸಲಾಗಿದೆ. ಗಾಯದಿಂದಾಗಿ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಿದ್ದ ಹುಲಿಯು, ಸುಲಭವಾಗಿ ಆಹಾರ ಸಂಪಾದಿಸಲು ಜಾನುವಾರು ಮತ್ತು ಮನುಷ್ಯರ ಮೇಲೆ ದಾಳಿ ಮಾಡಲು ಆರಂಭಿಸಿತ್ತು.
ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಹುಲಿ ದಾಳಿ ಹೆಚ್ಚಾಗಿದ್ದು, ಮೂವರು ರೈತರು ಪ್ರಾಣ ಕಳೆದುಕೊಂಡಿದ್ದು, ಓರ್ವ ಶಾಶ್ವತ ಅಂಗ ವೈಫಲ್ಯಕ್ಕೆ ತುತ್ತಾಗಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ಮೂರು ಹುಲಿಗಳನ್ನು ಸೆರೆ ಹಿಡಿದಿದ್ದು, ಶನಿವಾರ ತಡರಾತ್ರಿಯೂ 10 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಹುಲಿಯ ಕುತ್ತಿಗೆ ಭಾಗದಲ್ಲಿ ಉರುಳಿಗೆ ಸಿಲುಕಿ ಗಂಭೀರ ಗಾಯವಾಗಿದೆ. ಹೀಗಾಗಿ ಹುಲಿ ಗಾಯಗೊಂಡು ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡು, ಬಳಿಕ ಕಾಡಂಚಿಗೆ ಬಂದು ರೈತರ ಮೇಲೆ ದಾಳಿ ಮಾಡಿದೆ ಎನ್ನಲಾಗಿದ್ದು, ಪರೀಕ್ಷೆಯ ನಂತರ ದೃಢಪಡಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಹಳೆಹೇಗ್ಗುಡಿಲು ಗ್ರಾಮದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತ ಚೌಡ ನಾಯಕ ಎಂಬವರ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹುಲಿ ಸೆರೆಗೆ ಪಟ್ಟು ಹಿಡಿದರು. ಕೂಡಲೇ ಅರಣ್ಯ ಇಲಾಖೆ ಹಗಲು ರಾತ್ರಿ ಎನ್ನದೇ ಸುಮಾರು 100ಕ್ಕೂ ಅಧಿಕ ಸಿಬ್ಬಂದಿ ಸಾಕಾನೆಗಳಾದ ಭೀಮಾ, ಮಹೇಂದ್ರ, ಅಭಿಮನ್ಯು, ಲಕ್ಷ್ಮಣ, ಶ್ರೀಕಂಡ ಮೂಲಕ ಕೂಂಬಿಂಗ್ ಆರಂಭಿಸಿ, ಕೂಡಗಿಯಿಂದ ಸುಮಾರು 4 ಕಿ.ಮೀ. ದೂರದ ಹೊಸಕೋಟೆ ಬಳಿ ಅರಣ್ಯದ ಗಡಿಯ ಟ್ರಂಚ್ ನಲ್ಲಿ ಹುಲಿ ಇರುವ ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಕಾರ್ಯಾಚರಣೆ ನಡೆಸಿ ಪಶುವೈದ್ಯರಾದ ಡಾ.ರಮೇಶ್, ಡಾ.ವಸೀಂ ಮಿರ್ಜಾ ಹುಲಿಗೆ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಉರುಳಿಗೆ ಸಿಲುಕಿ ಹುಲಿಗೆ ಗಾಯ:
ಇನ್ನು ಸೆರೆಯಾದ ಹುಲಿಯ ಕುತ್ತಿಗೆ ಭಾಗ ಮತ್ತು ಕಾಲಿನಲ್ಲಿ ಗಂಭೀರ ಗಾಯಗಳಾಗಿದ್ದು, ಹುಲಿ ಸೆರೆಯಾದ ಸಂದರ್ಭದಲ್ಲಿ ಕುತ್ತಿಗೆಯಲ್ಲಿ ಉರುಳು ಇತ್ತು ಎನ್ನಲಾಗಿದೆ. ಸ್ಥಳದಲ್ಲಿಯೇ ಉರುಳು ತೆಗೆದು ಬಳಿಕ ಹುಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿ ಕಾರ್ಯಾಚರಣೆ ನಡೆಸುವಾಗ ಡ್ರೋನ್ ಕಾಮೆರಾದಲ್ಲಿ ಚಲನವಲನ ಪತ್ತೆಯಾಗಿತ್ತು. ಅದನ್ನು ಆಧರಿಸಿ ಸೆರೆ ಹಿಡಿಯಲಾಗಿದೆ. ಅದಕ್ಕೆ ಕತ್ತು ಮತ್ತು ಕಾಲಿನ ಭಾಗದಲ್ಲಿ ಗಾಯವಾಗಿದೆ ಎನ್ನಲಾಗಿದೆ ಎಂದು ಅರಣ್ಯ ಇಲಾಖೆ ಎಸಿಎಫ್ ಡಿ ಪರಮೇಶ್ ತಿಳಿಸಿದ್ದಾರೆ.
ಡಿಎನ್ ಎ ಪರೀಕ್ಷೆಗೆ ಆದೇಶ:
ಸರಗೂರು ತಾಲೂಕಿನಲ್ಲಿ ಪದೇ ಪದೇ ಜನರ ಮೇಲೆ ದಾಳಿ ಮಾಡಿ ಜನ, ಜಾನುವಾರುಗಳ ಸಾವಿಗೆ ಕಾರಣವಾಗಿದ್ದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದ್ದು, ಹುಲಿಯ ಡಿಎನ್.ಎ. ಪರೀಕ್ಷೆ ನಡೆಸಿ ಅದೇ ಹುಲಿಯೇ ಎಂದು ಖಚಿತ ಪಡಿಸಿಕೊಳ್ಳಲೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಈ ಹುಲಿಯ ಡಿ.ಎನ್.ಎ. ಎರಡನ್ನೂ ಪರಿಶೀಲಿಸಿ, ಸೆರೆ ಹಿಡಿಯಲಾದ ಹುಲಿ ಹೆಡಿಯಾಲ, ಮೊಳೆಯೂರು, ನುಗು ಸುತ್ತಮುತ್ತ ಜನರ ಅಮೂಲ್ಯ ಜೀವ ಹಾನಿ ಮಾಡಿದ ಹುಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಂದುವರಿದಂತೆ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರಿಗೆ ಹುಲಿ ಸಂಚಾರವಿರುವ ವಸತಿ ಪ್ರದೇಶಗಳ ಬಳಿ ಇದ್ದು, ಈ ಬೇರೆ ಹುಲಿಗಳ ಸಂಚಾರವಿದ್ದರೆ ಪರಿಶೀಲನೆ ನಡೆಸಿ ಕಾರ್ಯಾಚರಣೆ ಮಾಡಲು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಎಫ್ ಪರಮೇಶ್, ಸಿಸಿಎಫ್ ಪ್ರಭಾಕರನ್, ಎಸಿಎಫ್ ಡಿ ಪರಮೇಶ್, ಆರ್ ಎಫ್ಓ ವಿವೇಕ್, ಇನ್ನೂ ಅಧಿಕಾರಿಗಳು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


