ವರದಿ: ಮಂಜುಸ್ವಾಮಿ ಎಂ.ಎನ್.
ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯ ಬೆಳಧರ ಗ್ರಾಮದ ಸರ್ಕಾರಿ ಶಾಲೆಯ ಆಟದ ಮೈದಾನದ ಉಳಿವಿಗಾಗಿ ತುಮಕೂರು ನಗರದ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ಮೌನ ಮೆರವಣಿಗೆ ಇಂದು ಕಾಳಜಿ ಫೌಂಡೇಶನ್ ತುಮಕೂರು ವತಿಯಿಂದ ನಡೆಯಿತು.
ಈ ಹೋರಾಟಕ್ಕೆ ಸಾಮಾಜಿಕ ಕಳಕಳಿಯ ಅನೇಕ ಸಂಘ ಸಂಸ್ಥೆಗಳು, ವಿವಿಧ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಳಕಳಿಯುಳ್ಳ ಸಾರ್ವಜನಿಕರು ಕೈ ಜೋಡಿಸಿ, ಶಾಲೆಯ ಆಟದ ಮೈದಾನದ ಉಳಿವಿಗಾಗಿ ಧ್ವನಿಯೆತ್ತಿದರು.
ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ಹೊಂದಿಕೊಂಡಂತೆ ಎರಡು ಎಕರೆ ಭೂಮಿ ಗ್ರಾಮಠಾಣಾಗೆ ಸೇರಿದ್ದು, ರಾಜ್ಯ ಸರ್ಕಾರ ಶಾಲಾ ಮಕ್ಕಳ ಆಟದ ಮೈದಾನದ ಉದ್ದೇಶಕ್ಕಾಗಿ 3 ಎಕರೆ ಮೂರು ಗಂಟೆ ಜಮೀನು ಮಂಜೂರು ಮಾಡಿದ್ದು, ಸುಮಾರು ನಾಲ್ಕೈದು ಬಾರಿ ಕಂದಾಯ ಇಲಾಖೆಯಿಂದ ಸರ್ವೇ ಮಾಡಿ ಹದ್ದುಬಸ್ತು ಮಾಡಲಾಗಿದೆ ಹಾಗೂ ಇ ಸ್ವತ್ತು ಸಹ ಮಾಡಲಾಗಿದೆ.
ಶಾಲೆ ಮೈದಾನದ ಪಕ್ಕದಲ್ಲಿ ಒಬ್ಬ ಖಾಸಗಿ ವ್ಯಕ್ತಿಗೆ ಸೇರಿದ ಕಲ್ಯಾಣ ಮಂಟಪವಿದ್ದು, ಕಲ್ಯಾಣ ಮಂಟಪದ ಮಾಲೀಕ ಶಾಲಾ ಮೈದಾನವನ್ನು ಭೂ ಕಬಳಿಕೆ ಮಾಡಿಕಂಡು ಕಲ್ಯಾಣ ಮಂಟಪಕ್ಕೆ ವಾಹನಗಳ ಅಕ್ರಮ ನಿಲ್ದಾಣವಾಗಿ ಮಾಡಿಕೊಂಡಿದ್ದಾನೆ. ಈ ಕಲ್ಯಾಣ ಮಂಟಪಕ್ಕೆ ಆಗಮಿಸುವ ವಾಹನಗಳ ಚಾಲಕರು ಶಾಲಾ ಮೈದಾನದಲ್ಲಿ ವಿಪರೀತ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿಕೊಂಡು ಬಂದು ವಿದ್ಯಾರ್ಥಿಗಳ ಮೇಲೆಯೇ ವಾಹನ ಹತ್ತಿಸುವಂತಹ ಹಲವು ಘಟನೆಗಳು ಇಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡತಂಹ ಘಟನೆಗಳು ನಡೆದಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ ಅಭಿವೃದ್ಧಿಗಾಗಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮಕ್ಕಳ ಹಿತದೃಷ್ಟಿಯಿಂದ ಆಟದ ಮೈದಾನದ ಸುತ್ತಲೂ ತಂತಿ ಬೇಲಿ ನಿರ್ಮಾಣ ಕಾಮಗಾರಿಗೆ ಸುಮಾರು ಐದು ಲಕ್ಷ ರೂಪಾಯಿ ಮಂಜೂರು ಮಾಡಿದ್ದರೂ ಸಹ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್, ಮೈದಾನವನ್ನ ಹದ್ದುಬಸ್ತು ಮಾಡಿಕೊಂಡು ಮಕ್ಕಳ ಆಟದ ಮೈದಾನ ಉಳಿಸುವಲ್ಲಿ ವಿಫಲರಾಗಿ ಕರ್ತವ್ಯ ನಿಷ್ಠೆ ಮರೆತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಯ ಮೈದಾನ ಕಾಪಾಡಬೇಕಿದ್ದ ಅಧಿಕಾರಿಗಳು ಕಲ್ಯಾಣ ಮಂಟಪದ ಮಾಲೀಕನ ಪರ ನಿಂತು ವಾದ ಮಾಡುತ್ತಿದ್ದು, ಸರ್ಕಾರಿ ಕೆಲಸ ಮತ್ತು ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ. ಇಂತಹ ಅಧಿಕಾರಿಗಳನ್ನು ತಕ್ಷಣವೇ ಅಮಾನತ್ತು ಮಾಡಬೇಕೆಂದು ಹೋರಾಟಗಾರರು ಆಗ್ರಹಿಸಿದರು.
ಕಾಳಜಿ ತಂಡದ ನೇತೃತ್ವದಲ್ಲಿ ನಡೆದ ಬೆಳೆಧರ ಶಾಲೆ ಮೈದಾನ ಉಳಿವಿಗಾಗಿ ಮೌನ ಮೆರವಣಿಗೆ ಜಾಥಾದಲ್ಲಿ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು, ಲಂಚಮುಕ್ತ ಕರ್ನಾಟಕ ಬೆಂಗಳೂರು, ಭೀಮ್ ಆರ್ಮಿ, ಕರುನಾಡು ವಿಜಯ ಸೇನೆ, ರಣಧೀರ ವೇದಿಕೆ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಕೈ ಜೋಡಿಸಿತ್ತು.
ಮೌನ ಮೆರವಣಿಗೆ ಹೋರಾಟದಲ್ಲಿ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು ಇದರ ಹೆಚ್.ಎಂ.ವೆಂಕಟೇಶ್, ಲಂಚಮುಕ್ತ ಕರ್ನಾಟಕ ಬೆಂಗಳೂರು ಇದರ ಕುಣಿಗಲ್ ನರಸಿಂಹ ಮೂರ್ತಿ, ಭೀಮ್ ಆರ್ಮಿ ಮುಖಂಡರಾದ ಶ್ರೀನಿವಾಸ್, ಕರುನಾಡು ವಿಜಯ ಸೇನೆ ಅರುಣ್ ಕೃಷ್ಣಯ್ಯ, ಮಧುಗಿರಿ ತಿಮ್ಮರಾಜು, ರಣಧೀರ ವೇದಿಕೆ ಶಂಕರೆ ಗೌಡ್ರು, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ, ಡಮರುಗ ಉಮೇಶ್, ಮಾಧ್ಯಮ ಮಿತ್ರರು ಹಾಗೂ ಬೆಳೆಧರ ಗ್ರಾಮಸ್ಥರು ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296