ತುರುವೇಕೆರೆ: ತಾಲೂಕಿನ ಮಾಯಸಂದ್ರ ಚೆಕ್ ಪೋಸ್ಟ್ ನಿಂದ ಯಡಿಯೂರು ಗಡಿ ಭಾಗದವರೆಗೆ ರಸ್ತೆಯ ನಿರ್ಮಾಣ ಶೀಘ್ರವೇ ನಡೆಸುವಂತೆ ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರು ಗಡಿಯ ಭಾಗದಿಂದ ಮಾಯಸಂದ್ರ ಚೆಕ್ ಪೋಸ್ಟ್ ವರೆಗೆ ರಸ್ತೆ ಗುಂಡಿಗಳ ಮಯವಾಗಿದ್ದು, ಕಾರು ಮತ್ತು ಬಸ್ಸುಗಳ ಪ್ರಯಾಣಿಕರು ಹಾಗೂ ದಾರಿಹೋಕರು ಈ ಭಾಗದ ಶಾಸಕರು ಯಾರು ಎಂದು ಪ್ರಶ್ನೆ ಮಾಡುವ ಹಂತಕ್ಕೆ ತಲುಪಿದೆ . ಆದ್ದರಿಂದ ತುರ್ತಾಗಿ ಹೇಳಿ ಕೂಡಲೇ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿಸಿ, ಅದರ ಮೇಲೆ ಒಂದು ಪದರ ಡಾಂಬರು ಹಾಕಿಸಿ ಸದ್ಯಕ್ಕೆ ಸುಸ್ಥಿತಿಯಲ್ಲಿರುವ ಹಾಗೆ ನೋಡಿಕೊಳ್ಳಿ ಎಂದು ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಭಾಕರ್ ರವರಿಗೆ , ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾನು ಕಳೆದ ಬಾರಿ ಶಾಸಕನಾಗಿದ್ದಾಗ ಉನ್ನತ ದರ್ಜೆ ಆಸ್ಪತ್ರೆಯನ್ನಾಗಿ ಮಾಡಿಸಿದ್ದೆ. ಈ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರೆದಿದ್ದು, ಕೊಠಡಿಯಲ್ಲಿ ಯಂತ್ರೋಪಕರಣಗಳು ಇದ್ದರೂ ಸಹ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಸಮಯದಲ್ಲಿ ಹೆಚ್ಚಿನ ಹಣವನ್ನು ಒತ್ತಾಯಪೂರ್ವಕವಾಗಿ ಪಡೆದುಕೊಳ್ಳುತ್ತಿದ್ದಾರೆ. ಇಲ್ಲವಾದಲ್ಲಿ ಬೇರೆ ಆಸ್ಪತ್ರೆಗಳಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿರುವ ಎಲ್ಲಾ ಸಿಬ್ಬಂದಿಗಳೊಂದಿಗೆ ಸಭೆ ಕರೆದು ಸಮಾಲೋಚಿಸಿ ಶೀಘ್ರದಲ್ಲಿ ಇಂತಹ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆವಹಿಸಿ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆಯ ಸಂಬಂಧ ಪಟ್ಟಂತೆ ಶಾಸಕರು ಮಾತನಾಡಿ ತಾಲೂಕಿನಲ್ಲಿ 34 ಸಾವಿರ ಕೃಷಿಕರಿದ್ದು, ಸಾವಿರಾರು ಫ್ರೂಟ್ ಐಡಿಗಳು ಅಕ್ರಮವಾಗಿದ್ದು, ಅವುಗಳ ತನಿಖೆ ನಡೆಸಿ ಅಕ್ರಮವಾಗಿರುವ ಐ ಡಿಗಳನ್ನು ಡಿಲೀಟ್ ಮಾಡಿ ಕ್ಷೇತ್ರದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಿ, ಎಂದು ಸಹಾಯಕ ಕೃಷಿ ನಿರ್ದೇಶಕಿ ಕುಮಾರಿ ಪೂಜಾರವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಣು ಕುಮಾರ್, ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಬೆಸ್ಕಾಂನ ಎಇಇ ಚಂದ್ರನಾಯಕ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಶಿಕ್ಷಣ ಇಲಾಖೆಯ ಬಿಇಓ ಪದ್ಮನಾಭ. ಪಿ ಆರ್ ಡಿ ಎ ಇ ಇ ವಾಸುದೇವ್. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕುಮಾರಿ ತ್ರಿವೇಣಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ, ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ದಿಲೀಪ್, ಆರೋಗ್ಯ ಇಲಾಖೆಯ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಪ್ರಿಯ ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ.