ತುಮಕೂರು: ತುಮಕೂರು ಜಿಲ್ಲೆಯ ಹೊಯ್ಸಳ ಕಟ್ಟೆ ಗ್ರಾಮದ ಮಕ್ಕಳಿಗೆ ಸಮರ್ಪಕವಾದ ಅಂಗನವಾಡಿ ಕೇಂದ್ರ ಇಲ್ಲ, ಈಗಾಗಲೇ ಹೊಸ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿದ್ದರೂ ಕಟ್ಟಡದ ಉದ್ಘಾಟನೆಗೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗಕ್ಕೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ ಎನ್. ಅವರು ದೂರು ನೀಡಿದ್ದಾರೆ.
ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿಗೆ ಬರುತ್ತಿದ್ದಾರೆ. ಹೊಯ್ಸಳ ಕಟ್ಟೆ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಯ ಹಂತದಲ್ಲಿರುವ ಈ ಕಟ್ಟಡವನ್ನು ಇನ್ನೂ ಉದ್ಘಾಟಿಸದೇ ವಿಳಂಬ ನೀತಿ ಅನುಸಲಾಗುತ್ತಿದ್ದು, ಇದರಿಂದಾಗಿ ಬಡ ಮಕ್ಕಳು ಶಿಥಿಲಾವಸ್ಥೆಯಲ್ಲಿರುವ ಹಳೆಯ ಅಂಗನವಾಡಿಯಲ್ಲೇ ದಿನದೂಡುವಂತಾಗಿದೆ ಎಂದು ನರಸಿಂಹಮೂರ್ತಿ ಎನ್. ತಿಳಿಸಿದ್ದಾರೆ.
ಈ ಬಗ್ಗೆ ನಮ್ಮತುಮಕೂರು ವಾಹಿನಿ ಜೊತೆಗೆ ಮಾತನಾಡಿದ ನರಸಿಂಹಮೂರ್ತಿ ಎನ್., ನಾವು ದೂರು ನೀಡಿದ ಬಳಿಕ ನಿಂತು ಹೋಗಿದ್ದ ಅಂಗನವಾಡಿ ಕಟ್ಟಡದ ಕಾಮಗಾರಿ ಕೇವಲ ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ. ಹೀಗಾಗಿ ನಮಗೆ ಕಟ್ಟಡದ ಗುಣಮಟ್ಟದ ಬಗ್ಗೆಅನುಮಾನವಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕಟ್ಟಡ ಹಸ್ತಾಂತರಕ್ಕೂ ಮೊದಲು ಕಟ್ಟಡದ ಗುಣಮಟ್ಟವನ್ನು ಪರಿಶೀಲಿಸಿ, ನಂತರ ಹಸ್ತಾಂತರಕ್ಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನೂ ಮಕ್ಕಳ ಹಕ್ಕುಗಳ ಆಯೋಗದ ತಿಪ್ಪೇಸ್ವಾಮಿ ಕೆ.ಟಿ. ಅವರನ್ನು ಸಂಪರ್ಕಿಸಿದಾಗ, ಅಂಗನವಾಡಿ ಕಟ್ಟಡ ಪೂರ್ಣಗೊಂಡಿಲ್ಲ ಎಂಬ ಬಗ್ಗೆ ನಮಗೆ ದೂರು ಬಂದಿದೆ. ಈ ಬಗ್ಗೆ ನಾವು ವಿಚಾರಿಸಿದಾಗ ಕಟ್ಟಡ ಪೂರ್ಣಗೊಂಡಿದೆ, ಸಣ್ಣಪುಟ್ಟ ಕೆಲಸಗಳು ಮಾತ್ರವೇ ಬಾಕಿ ಉಳಿದಿದೆ ಎನ್ನುವುದು ತಿಳಿದು ಬಂದಿದೆ. ಆದರೆ ಇಲಾಖೆಯಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಈ ಬಗ್ಗೆ ಅವರು ವರದಿ ನೀಡಬೇಕು, ವರದಿ ನೀಡಿಲ್ಲವಾದರೆ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


