ರಾಮನಗರ: ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಭಾನುವಾರ ಬೆಳಿಗ್ಗೆ ಆರಂಭಗೊಂಡ ಮೇಕೆದಾಟು ಪಾದಯಾತ್ರೆಗೆ ಜನಸಾಗರವೇ ಹರಿದು ಬಂದಿದ್ದು, ಬೆಳಿಗ್ಗೆ 9: 30ರ ವೇಳೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಹಸಿರು ನಿಶಾನೆ ತೋರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ತಡೆ ಒಡ್ಡಬಹುದು ಎನ್ನಲಾಗಿತ್ತು. ಆದರೆ ಸದ್ಯ ಅಂತಹ ಯಾವ ಘಟನೆಗಳೂ ನಡೆದಿಲ್ಲ.
ಕಾಂಗ್ರೆಸ್ ನೇತೃತ್ವದ ಪಾದಯಾತ್ರೆ ಸುಗಮವಾಗಿ ನಡೆದಿದ್ದು, ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸಂಗಮದತ್ತ ಬಂದಿದ್ದಾರೆ. ಕನಕಪುರ-ಮೇಕೆದಾಟು ರಸ್ತೆ ತುಂಬೆಲ್ಲ ವಾಹನಗಳೇ ತುಂಬಿಕೊಂಡಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.
ಪಾದಯಾತ್ರೆಗೆ ಬರುವವರಿಗೆ ಮಾಸ್ಕ್, ಸ್ಯಾನಿಟೈಸರ್, ಟೀ ಶರ್ಟ್‌ಗಳನ್ನು ವಿತರಿಸಲಾಗುತ್ತಿದೆ. ಊಟೋಪಚಾರದ ಜೊತೆಗೆ ಆಯೋಜಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನೂ ಪಾದಯಾತ್ರೆಗೆ ಮುನ್ನ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಕಾವೇರಿ ನದಿಗೆ ಪೂಜೆ ಸಲ್ಲಿಸಿದರು. ತೆಪ್ಪದಲ್ಲಿ ತೆರಳಿ ಕಾವೇರಿ ಮಾತೆಗೆ ನಮಿಸಿದರು. ಬಳಿಕ ನದಿ ತಟದಲ್ಲಿ ನಡೆದ ಹೋಮಗಳಲ್ಲೂ ಪಾಲ್ಗೊಂಡರು. ನಂತರವಷ್ಟೇ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy