ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ವಿಚ್ಛೇದಿತ ಪತ್ನಿ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು ಗೇಟ್ಸ್ ಫೌಂಡೇಶನ್ ಗೆ ರಾಜೀನಾಮೆ ನೀಡಿದ್ದಾರೆ. ಬಿಲ್ ಗೇಟ್ಸ್ ಜೊತೆ ವಿಚ್ಛೇದನ ಪಡೆದ ಮೂರು ವರ್ಷದ ಬಳಿಕ ಮಿಲಿಂಡಾ ಫ್ರೆಂಚ್ ಗೇಟ್ಸ್ ಅವರು ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್ ನ ಸಹ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ವಿಶ್ವದ ಬಿಲಿಯನೇರ್ ಉದ್ಯಮಿ ಬಿಲ್ ಗೇಟ್ಸ್ 20 ವರ್ಷಗಳ ಹಿಂದೆ ಪತ್ನಿ ಮಿಲಿಂಡಾ ಜೊತೆ ಸೇರಿ ವಿಶ್ವದ ಅತೀ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆ ಸ್ಥಾಪಿಸಿದ್ದರು.
ಈ ಮೂಲಕ ವಿವಿಧ ದೇಶಗಳಲ್ಲಿ ಸಾಮಾಜಿಕ ಕಾರ್ಯ ನಿರ್ವಹಿಸಿದ್ದಾರೆ. “ಬಿಲ್ ಮತ್ತು ನಾನು ಒಟ್ಟಾಗಿ ನಿರ್ಮಿಸಿದ ಸಂಸ್ಥೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇದರೊಂದಿಗೆ ನಾವು ಜಗತ್ತಿನೆಲ್ಲೆಡೆ ಅಸಾಮಾನತೆ ಪರಿಹಾರ ಸೇರಿದಂತೆ ಹಲವು ಅದ್ಭುತ ಕೆಲಸಗಳನ್ನು ಮಾಡಿದ್ದೇವೆ” ಎಂದು ಮಿಲಿಂಡಾ ತಿಳಿಸಿದ್ದಾರೆ. ಇದೇ ವೇಳೆ, ಫೌಂಡೇಷನ್ ಸಿಇಒ ಮಾರ್ಕ್ ಸುಜಾಮ್ಯಾನ್ ಅವರನ್ನು ಶ್ಲಾಘಿಸಿದ್ದಾರೆ. ಮಿಲಿಂಡಾ ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಬಿಲ್ ಗೇಟ್ಸ್, ಸಂಸ್ಥೆಯಲ್ಲಿ ಮಿಲಿಂಡಾ ಅವರ ನಿರ್ಣಾಯಕ ಕೊಡುಗೆಗಳಿಗೆ ಧನ್ಯವಾದ. ಆಕೆ ಸಂಸ್ಥೆ ತೊರೆಯುತ್ತಿರುವುದು ಬೇಸರದ ವಿಷಯ. ಆದರೆ, ಭವಿಷ್ಯದಲ್ಲಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ದೊಡ್ಡ ಪರಿಣಾಮ ಬೀರಲಿದ್ದಾರೆ ಎಂದು ತಿಳಿಸಿದ್ದಾರೆ.
ಮಿಲಿಂಡಾ ನಿರ್ಗಮನದ ಹಿನ್ನೆಲೆಯಲ್ಲಿ ಫೌಂಡೇಷನ್ ಹೆಸರು ಬದಲಾಯಿಸಲಿದ್ದು, ಕೇವಲ ಗೇಟ್ಸ್ ಫೌಂಡೇಷನ್ ಎಂದು ಇರಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಫೌಂಡೇಷನ್ ನಲ್ಲಿ ಅವರು ಮಹಿಳೆಯರು ಮತ್ತು ಕುಟುಂಬಗಳ ಭವಿಷ್ಯ ಕೇಂದ್ರೀಕರಿಸಿ ಕೆಲಸಗಳಿಗೆ ಬದ್ಧತೆ ತೋರುವುದಾಗಿ ತಿಳಿಸಿದ್ದರು. ಇದೀಗ ಸಂಸ್ಥೆ ತೊರೆದಿದ್ದು ಗೇಟ್ಸ್ ಅವರೊಂದಿಗೆ ಒಪ್ಪಂದದ ಭಾಗವಾಗಿ 12.5 ಬಿಲಿಯನ್ ಡಾಲರ್ ಪಡೆಯಲಿದ್ದಾರೆ. ಈ ಹಣವನ್ನು ಗೇಟ್ಸ್ ವೈಯಕ್ತಿಕ ಹಣದಿಂದ ನೀಡಲಿದ್ದು, ಫೌಂಡೇಷನ್ ದತ್ತಿಯಿಂದ ನೀಡುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


