ಬೆಂಗಳೂರು: ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದ್ದು, ಇದನ್ನು ಸುಧಾರಿಸಲು ಮೆಟ್ರೋ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕಕೊಂಡಿ ಯೋಜನೆ ಅಗತ್ಯವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ (ORRCA) ಸದಸ್ಯರೊಂದಿಗೆ ಕಾಡುಬೀಸನಹಳ್ಳಿಯಲ್ಲಿ ನಡೆದ ಸಂವಾದ ಸಭೆಯಲ್ಲಿ ಅವರು ಹೇಳಿದ್ದಿಷ್ಟು:“ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಬೆಂಗಳೂರಿನ ಐದನೇ ಒಂದು ಭಾಗದಷ್ಟು ಆದಾಯ ಹೊರ ವರ್ತುಲ ರಸ್ತೆಯ ಉದ್ದಿಮೆಗಳಿಂದಲೇ ಬರುತ್ತಿದೆ. ನಮಗೆ ಬೆಂಗಳೂರಿನ ಹಾಗೂ ಹೊರ ವರ್ತುಲ ರಸ್ತೆಯ ಉದ್ದಿಮೆಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಅರಿವಿದೆ. ನಿಮಗೆ ಹಾಗೂ ನಿಮ್ಮ ನೌಕರರರಿಗೆ, ಆ ಭಾಗದ ನಿವಾಸಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮಸ್ಯೆ ನಿವಾರಿಸುವುದೇ ನಮ್ಮ ಆದ್ಯತೆ.
ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ 6 ರಿಂದ 8 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಚಾರ ದಟ್ಟಣೆಗೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿ- ಮುಂಗಟ್ಟುಗಳನ್ನು ಗುರುತಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ತೆರವುಗೊಳಿಸಲಾಗುವುದು.
ಬೆಂಗಳೂರು ಯೋಜಿತ ನಗರವಲ್ಲ. ಕಳೆದ 30 ವರ್ಷಗಳಲ್ಲಿ ಹೆಚ್ಚು ಬೆಳವಣಿಗೆ ಕಂಡಿದೆ. ಇಲ್ಲಿ ಸಂಚಾರ ದಟ್ಟಣೆಯೊಂದೆ ಸಮಸ್ಯೆಯಲ್ಲ, ಘನತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ವಸತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಈ ನಗರ ಹೊಂದಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಸವಾಲು ನಮ್ಮ ಮುಂದಿದೆ.
ಬೆಂಗಳೂರಿನ ಪೊಲೀಸ್, ಬಿಬಿಎಂಪಿ, ಬಿಡಿಎ, ಮೆಟ್ರೋ ಕಮಿಷನರ್ಗಳಿಗೆ ಸಂಚಾರ ದಟ್ಟಣೆ ಬಗ್ಗೆ ಅರಿವಿದೆ, ಅವರುಗಳು ಸಹ ಸರ್ಕಾರದ ಒತ್ತಾಸೆಯಂತೆ ಕೆಲಸ ಮಾಡಲಿದ್ದಾರೆ. ಹೊರವರ್ತುಲ ರಸ್ತೆಯ ದಟ್ಟಣೆ ಕಡಿಮೆ ಮಾಡಲು ಕೆಲವು ಸ್ಥಳಗಳನ್ನು ಗುರುತಿಸಿದ್ದೇವೆ. ಎಲ್ಲರೂ ಸೇರಿ ಜವಾಬ್ದಾರಿಯಿಂದ ಸಮಸ್ಯೆಗೆ ಪರಿಹಾರ ನೀಡಬೇಕಿದೆ.” ಎಂದು ಹೇಳಿದರು.


