ಬೆಂಗಳೂರು: ರಾಜ್ಯಾದ್ಯಂತ ಹೆಚ್ಚಾಗುತ್ತಿರುವ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು, ಪರಿಸರ ತಜ್ಞರು ಹಾಗೂ ಎನ್ ಜಿಒಗಳ ಸಹಭಾಗಿತ್ವದೊಂದಿಗೆ ರಾಜ್ಯಮಟ್ಟದ ವನ್ಯಜೀವಿ–ಮಾನವ ಸಂಘರ್ಷ ನಿರ್ವಹಣಾ ಕಾರ್ಯಪಡೆ ರಚಿಸುವಂತೆ ಸೂಚನೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಹುಲಿ, ಕಾಡಾನೆ, ಚಿರತೆ ಮುಂತಾದ ವನ್ಯಜೀವಿಗಳು ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಸಂದರ್ಭಗಳಲ್ಲಿ ಜನರ ಭದ್ರತೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯಪದ್ಧತಿ (SOP) ಅನುಸರಿಸಿ ಕಾರ್ಯಾಚರಣೆ ನಡೆಸುವ ವೇಳೆ 155 ಸೆಕ್ಷನ್ ಅಡಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಲು ಸೂಚಿಸಿದರು.
ಈ ಕಾರ್ಯಪಡೆ ಕಾಡಿನಂಚಿನ ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲು, ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆಯ ಮಹತ್ವ ತಿಳಿಸಲು ಮತ್ತು ಅಧಿಕಾರಿಗಳು–ಗ್ರಾಮಸ್ಥರ ನಡುವೆ ಸ್ನೇಹಸೇತುವೆ ಆಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಥರ್ಮಲ್ ಕ್ಯಾಮರಾ, ಡ್ರೋನ್, ವಾಟ್ಸ್ ಅಪ್ ಎಚ್ಚರಿಕೆ ವ್ಯವಸ್ಥೆ ಮತ್ತು ಕಮಾಂಡ್ ಸೆಂಟರ್ ಮೂಲಕ ತ್ವರಿತ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಜನರೊಂದಿಗೆ ಸ್ನೇಹಪರವಾಗಿ ವರ್ತಿಸಿ, ವನ್ಯಜೀವಿ ದಾಳಿಗಳನ್ನು ತಡೆಗಟ್ಟಲು ತಕ್ಷಣದ ಪ್ರತಿಕ್ರಿಯೆ ನೀಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರು ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಎ.ಪಿ.ಸಿಸಿಎಫ್ ಮನೋಜ್ ರಾಜನ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಎಸ್‌ಪಿಗಳಾದ ಕವಿತಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



