ತುಮಕೂರು: ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಉದ್ಯೋಗ ಮೇಳದಲ್ಲಿ ಆಯ್ಕೆಯಾದ 150ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ವಿತರಣೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ 76ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಎಂಪ್ರೆಸ್ ಬಾಲಕಿಯರ ಕಾಲೇಜಿನಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಭೂ ಮಂಜೂರಾತಿ ಪೋಡಿ ದುರಸ್ತಿ ದಾಖಲೆ ಮತ್ತು ಪಹಣಿ ವಿತರಣೆ, ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದಿಬ್ಬೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಕಳೆದ ಜನವರಿ 9ರಂದು ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ವಿತರಣೆ ಮಾಡಿದ ನಂತರ ಮಾತನಾಡಿದ ಅವರು, ಪ್ರತಿ ವರ್ಷ ಲಕ್ಷಾಂತರ ಯುವಕರು ಪದವಿ ಪೂರ್ಣಗೊಳಿಸುತ್ತಿದ್ದಾರೆ.
ಅಂಥವರಿಗೆ ಉದ್ಯೋಗ ಸಿಗುತ್ತಿಲ್ಲ. ಬಿ.ಎ.ಪದವಿ ಮಾಡಿದವರಿಗೆ ತಾಂತ್ರಿಕ ಉದ್ಯೋಗ ದೊರೆಯುವುದಿಲ್ಲ. ಇದು ಜಾಗತಿಕವಾಗಿ ಅತಿದೊಡ್ಡ ಸಮಸ್ಯೆಯಾಗಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 5,000 ಯುವಕರು ಭಾಗವಹಿಸಿದ್ದರು. ಅದರಲ್ಲಿ 1700 ಯುವಕರಿಗೆ ಉದ್ಯೋಗ ದೊರೆತಿದೆ ಎಂದು ತಿಳಿಸಿದರು.
ತುಮಕೂರಿನ ವಸಂತನರಸಾಪುರದಲ್ಲಿ 20,000 ಎಕರೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶ, ಬಾಂಬೆ—ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಯುವಕರಿಗೆ ಹೆಚ್ಚು ಉದ್ಯೋಗಗಳು ಸಿಗುತ್ತವೆ ಎಂದು ಹೇಳಿದರು.
ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಅತ್ಯಂತ ಅರ್ಥಗರ್ಭಿತವಾಗಿದ್ದು, ದೇಶದ ಜನಸಮುದಾಯಕ್ಕೆ ನ್ಯಾಯ ಒದಗಿಸುವಂತಹ ಸಂವಿಧಾನವನ್ನು 1950ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ನ್ಯಾಯ, ಸ್ವಾಭಿಮಾನದ ಬದುಕು ನೀಡಬೇಕು ಎಂಬುದನ್ನು ಉಲ್ಲೇಖಿಸಿ ಕಾನೂನು ರೂಪಿಸಲಾಗಿದ್ದು, 14 ವರ್ಷದೊಳಗಿನ ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು, ಹಸಿವಿನಿಂದ ಬಳಲಬಾರದು ಎಂದು ಆಹಾರ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಭೂಮಿ ಇಲ್ಲದವರಿಗೆ ಭೂಮಿ ಸಿಗಬೇಕು ಎಂಬುದು ಸಂವಿಧಾನಾತ್ಮಕವಾಗಿ ಬಂದಿರುವುದು ಹೆಮ್ಮೆಪಡುವ ವಿಷಯಗಳಾಗಿವೆ ಎಂದರು.
ರಾಜ್ಯ ಸರ್ಕಾರದಿಂದ ಭೂಮಿ ಇಲ್ಲದ ಜನಸಮುದಾಯಕ್ಕೆ ಭೂಮಿಯನ್ನು ಹಂಚಲಾಗುತ್ತಿದೆ. ದೇವರಾಜ ಅರಸು ಅವರು ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಉಳುವವನೆ ಭೂಮಿ ಒಡೆಯ ಎಂಬ ಕಾನೂನು ತಂದರು. ಇದರ ಫಲವಾಗಿ ಲಕ್ಷಾಂತರ ಜನರು ಭೂ ಮಾಲೀಕರಾದರು. ಇದು ಇಡೀ ದೇಶದಲ್ಲಿ ಆಂದೋಲನವಾಯಿತು. ಹತ್ತಾರು ವರ್ಷ ಭೂಮಿ ಉಳುಮೆ ಮಾಡುವ ರೈತರಲ್ಲಿ ದಾಖಲೆಗಳಿರುವುದಿಲ್ಲ. ಇದರಿಂದ ರೈತನಿಗೆ ಸವಲತ್ತುಗಳು ಸಿಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಭೂಮಿ ಕಾರ್ಯಕ್ರಮವನ್ನು ರೂಪಿಸಿದರು. ಇದರ ಮುಂದಿನ ಭಾಗವಾಗಿ ಪಹಣಿ, ಹಕ್ಕು ಪತ್ರ ನೀಡುವುದು ಮುಂದುವರೆದಿದೆ ಎಂದು ಹೇಳಿದರು.
ರೈತರಿಗೆ ಭೂ ದಾಖಲೆಯ ಪಹಣಿ, ಹಕ್ಕುಪತ್ರ ನೀಡಲು ರಾಜ್ಯ ಮಟ್ಟದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲು ಎಂಬುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಿಂತನೆ ನಡೆಸಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ 1,000 ಜನರಿಗೆ ಭೂ ದಾಖಲೆಯ ಹಕ್ಕು ಪತ್ರಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಹಕ್ಕು ಪತ್ರ ವಿತರಿಸಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂಬುದಕ್ಕೆ ಈ ಕಾರ್ಯಕ್ರಮ ನಿದರ್ಶನವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅರ್ಹತೆ ಇರುವವರಿಗೆ ಭೂ ದಾಖಲೆಗಳ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರವು ಪ್ರತಿಯೊಬ್ಬರಿಗೂ ಸಾಮಾಜಿಕ ಬದಕನ್ನು ನೀಡಬೇಕೆಂಬ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ(ನರೇಗಾ) ಯೋಜನೆ ಜಾರಿಗೆ ತರದೇ ಹೋಗಿದ್ದರೆ, ಜನರು ಊರು ಬಿಟ್ಟು ವಲಸೆ ಹೋಗಬೇಕಿತ್ತು ಎಂದರಲ್ಲದೆ, ಐದು ಗ್ಯಾರಂಟಿ ಯೋಜನೆಗಳಿಗೆ ತುಮಕೂರು ಜಿಲ್ಲೆಯೊಂದರಲ್ಲಿಯೇ ಕೋಟ್ಯಂತರ ರೂ.ಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡದ ಶ್ರಮದಿಂದ ಜಿಲ್ಲೆಯ ರೈತರಿಗೆ ಭೂ ಮಂಜೂರಾತಿ ಪೋಡಿ ದುರಸ್ತಿ ದಾಖಲೆ ಮತ್ತು ಪಹಣಿ ಪತ್ರಗಳ ವಿತರಣೆ, ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದಿಬ್ಬೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳ ವಿತರಣೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಜಿಲ್ಲಾಡಳಿತದಿಂದ ಜಿಲ್ಲೆಯ ಜನತೆಗೆ ಉತ್ತಮ ಸೇವೆ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಅವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4