ಶಿವಮೊಗ್ಗ: ಪುತ್ರನಿಗೆ ಟಿಕೆಟ್ ಸಿಗದ ಬೆನ್ನಲ್ಲೇ ಬಂಡಾಯವೆದ್ದಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ನಡೆಯುತ್ತಿರುವ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಗೈರಾಗಿದ್ದಾರೆ.
ಕಾಂತೇಶ್ ಅವರಿಗೆ ಬಿಜೆಪಿಯಿಂದ ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ಸಿಗದಿದ್ದರಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಡಾಯವೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶಿವಮೊಗ್ಗದಿಂದ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಮೋದಿ ಸಮಾವೇಶಕ್ಕೆ ಹಾಜರಾಗುವುದಿಲ್ಲ. ಆದರೆ ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಇದೀಗ ಅದರಂತೆ ಮೋದಿ ಸಮಾವೇಶಕ್ಕೆ ಗೈರಾಗಿದ್ದಾರೆ.
ಇಂದು ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಬಿಳಕಿ, ಗೋಣಿಬೀಡು, ತೊಗರ್ಸಿ, ಹಿರೇಮಾಗಡಿ, ಜಡೇ-ಮೂಡಿ, ಶಾಂತಪುರ, ಹಾರ್ನಹಳ್ಳಿ ಚೌಕಿಮಠ, ಮೂಲೆಗದ್ದೆ, ಹುಂಚಾ ಜೈನಮಠ, ಶಿಕಾರಿಪುರದ ಸಾಲೂರು ಸೇರಿದಂತೆ 10ಕ್ಕೂ ಹೆಚ್ಚು ಮಠಗಳ ಭೇಟಿಗೆ ತೆರಳಿದ್ದು, ವೀರಶೈವ-ಲಿಂಗಾಯತ ಹಾಗೂ ಜೈನ ಸಮುದಾಯದ ಶ್ರೀಗಳ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.
ಅಷ್ಟೇ ಅಲ್ಲದೇ ಮತ್ತೊಂದು ಕಡೆ ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳುವ ಗಣ್ಯರ ಪಟ್ಟಿಯಲ್ಲಿ ಈಶ್ವರಪ್ಪ ಅವರ ಹೆಸರು ಇಲ್ಲ. ವೇದಿಕೆಯಲ್ಲಿ ಪ್ರಧಾನಿ ಜೊತೆ 43 ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ವೇದಿಕೆಯಲ್ಲಿ ಇರುವವರ ಪಟ್ಟಿಯಿಂದ ಈಶ್ವರಪ್ಪ ಹೆಸರನ್ನು ತೆಗೆದು ಹಾಕಲಾಗಿದೆ.
ಇಂದು ಪ್ರಧಾನಿ ಜೊತೆ ಜೆಡಿಎಸ್ ಶಾಸಕರಿಗೆ, ಜೆಡಿಎಸ್ ಪರಾಜಿತ ಅಭ್ಯರ್ಥಿಗಳಿಗೆ, ಬಿಜೆಪಿ ಮಾಜಿ ಶಾಸಕರಿಗೆ, ಮಾಜಿ ಎಂಎಲ್ಸಿಗಳಿಗೆ ಕೂಡಾ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಈಶ್ವರಪ್ಪ ಹೆಸರು ವೇದಿಕೆ ಮೇಲಿನ ಗಣ್ಯರ ಪಟ್ಟಿಯಿಂದ ಕೈಬಿಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


