ತುಮಕೂರು: ಕಳೆದ ಕೆಲವು ದಿನಗಳಿಂದ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮೈದಾಳ ಕೆರೆ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ನೀರು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ. ಈ ಶುಭ ಸುದ್ದಿಯನ್ನು ಶಾಸಕ ಕೆ.ಎನ್. ರಾಜಣ್ಣ ಅವರು ಘೋಷಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ಯಶಸ್ವಿಯಾಗಿ ಕೊನೆಗಾಣಿಸಿದರು.
ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಬಿ. ಸುರೇಶ್ ಗೌಡ ಅವರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಮೈದಾಳ ಕೆರೆಯ ನೀರನ್ನು ಸಂರಕ್ಷಿಸಬೇಕು, ಕಾಲುವೆಗೆ ಹರಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನೀರು ಬಿಡುಗಡೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನು ವಿರೋಧಿಸಿದ ಅಚ್ಚುಕಟ್ಟು ಪ್ರದೇಶದ ರೈತರು, ತಮ್ಮ ಸಾವಿರಾರು ಎಕರೆ ಅಡಿಕೆ ಮತ್ತು ತೆಂಗಿನ ತೋಟಗಳು ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಧರಣಿ ಆರಂಭಿಸಿದ್ದರು.
ಕೆ.ಎನ್. ರಾಜಣ್ಣ ಮಧ್ಯಪ್ರವೇಶ:
ರೈತರ ಹೋರಾಟಕ್ಕೆ ಬೆಂಬಲ ನೀಡಿದ ಶಾಸಕ ಕೆ.ಎನ್.ರಾಜಣ್ಣ, ಸೋಮವಾರ ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. “ರೈತರು ಕೇವಲ ತಮ್ಮ ಪಾಲಿನ 2 ಅಡಿ ನೀರನ್ನು ಕೇಳುತ್ತಿದ್ದಾರೆ ಹೊರತು ಬೇರೆಯೇನಲ್ಲ. ಕೆರೆಯಲ್ಲಿ ಸಾಕಷ್ಟು ನೀರಿದ್ದು, ತಕ್ಷಣ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು. ಅಲ್ಲದೆ, ನೀರು ಬಿಡುಗಡೆಯಾಗದ ಹೊರತು ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ರೈತರ ಆಕ್ರೋಶ ಮತ್ತು ರಾಜಣ್ಣ ಅವರ ಒತ್ತಾಯಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು, ಸ್ಥಗಿತಗೊಂಡಿದ್ದ ನೀರನ್ನು ಮುಂದಿನ 9 ದಿನಗಳ ಕಾಲ ಹರಿಸುವಂತೆ ಸೂಚನೆ ನೀಡಿದರು. ಈ ಸುದ್ದಿಯನ್ನು ರಾಜಣ್ಣ ಅವರು ಪ್ರಕಟಿಸುತ್ತಿದ್ದಂತೆ, ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಜೈಕಾರ ಕೂಗಿ, ಹೂವಿನ ಹಾರ ಹಾಕಿ ಸಂಭ್ರಮಿಸಿದರು.
ಕೆ.ಟಿ. ಚಂದ್ರಶೇಖರ್ ಮತ್ತು ಪಿ. ಮೂರ್ತಿ ಅವರ ಸಮ್ಮುಖದಲ್ಲಿ ತಕ್ಷಣವೇ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮೈದಾಳ ಕೆರೆಯನ್ನು ಕೆಬಿಜೆಎನ್‌ಎಲ್‌ನಿಂದ ಮರಳಿ ಸಣ್ಣ ನೀರಾವರಿ ಇಲಾಖೆಗೆ ಪಡೆಯಲು ಮತ್ತು ಕೆರೆ ಅಂಗಳದ ಒತ್ತುವರಿ ತೆರವುಗೊಳಿಸಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಮಾವೇಶ ನಡೆಸಲು ಕೆ.ಎನ್. ರಾಜಣ್ಣ ನಿರ್ಧರಿಸಿದ್ದಾರೆ.
ಈ ಹೋರಾಟದಲ್ಲಿ ಎಂಎಲ್‌ಸಿ ಆರ್. ರಾಜೇಂದ್ರ, ಮಾಜಿ ಸಚಿವ ಎಸ್. ಶಿವಣ್ಣ, ಮಾಜಿ ಶಾಸಕ ಗಂಗಹನುಮಯ್ಯ ಸೇರಿದಂತೆ ಮೈದಾಳ, ಬಂದೀಹಳ್ಳಿ, ಕಾತ್ಸಂದ್ರ ಸುತ್ತಮುತ್ತಲ ಗ್ರಾಮಗಳ ಸಾವಿರಾರು ರೈತರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


