ತುಮಕೂರು: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಕೆಲವು ತಪ್ಪು ಮಾಹಿತಿಗಳನ್ನು ಕೊಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಇನ್ನುಮುಂದೆ ಈ ರೀತಿಯಾದರೆ ಸಹಿಸುವುದಿಲ್ಲ. ಸಭೆಗೆ ಬರುವ ಮುನ್ನ ಇಲಾಖೆಯ ತಯಾರಿ ಮಾಡಿಕೊಂಡು ಬರಬೇಕು. ಸಭೆಯಲ್ಲಿ ಸರಿಯಾದ ಉತ್ತರ ನೀಡದಿದ್ದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಜವಾಬ್ಧಾರಿಯಿಂದ ಬರಬೇಕು ಎಂದು ಗೃಹ ಸಚಿವ ಪರಮೇಶ್ವರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2024–25ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಬಳಿಕ ಅಧಿಕಾರಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಚರ್ಚಿಸಲಾದ ಅಂಶಗಳನ್ನು ಬರೆದುಕೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಗಂಭೀರವಾಗಿ ಪರಿಗಣಿಸದಿದ್ದರೆ ಕಷ್ಟವಾಗುತ್ತದೆ. ಆಡಳಿತ ಚುರುಕಾಗಬೇಕು. ಚುನಾವಣೆ ಎಲ್ಲ ಮುಗಿದಿವೆ. ಜನರ ಕೆಲಸ ಮಾಡದಿದ್ದರೆ ಇನ್ನು ಏನು ಮಾಡುತ್ತೀರಿ ಇಂದು ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹ ಮಾಡಬೇಕು. ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ. ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಬರುವುದಿಲ್ಲ, ಪಾಠವನ್ನು ಮಾಡುವುದಿಲ್ಲ. ಡಿಡಿಪಿಐ ಮತ್ತು ಬಿಇಒ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಕೊರಟಗೆರೆ ಬಿಇಒ ಈವರೆಗೂ ನೋಡಿಲ್ಲ. ನನ್ನನ್ನು ಭೇಟಿಯೂ ಮಾಡಿಲ್ಲ. ಪ್ರತಿಯೊಬ್ಬ ಅಧಿಕಾರಿಗಳು ಭೇಟಿ ನೀಡಿ, ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವುದು ಕಡ್ಡಾಯ. ತಿಂಗಳಿಗೊಮ್ಮೆ ಜಿಲ್ಲಾಪಂಚಾಯತ್ ಸಿಇಒ ಅವರಿಗೆ ಸಲ್ಲಿಸಬೇಕು ಎಂದರು.
ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಫೋನ್ ಏಕೆ ತೆಗೆಯುವುದಿಲ್ಲ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಬೇಕು. ಜನರಿಗೆ ಸ್ಪಂದಿಸದಿದ್ದರೆ ಹೇಗೆ? ಉಚಿತ ಚಿಕಿತ್ಸೆ ಸಿಗುತ್ತದೆ, ಒಳ್ಳೆಯ ವೈದ್ಯರಿರುತ್ತಾರೆ ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ನೀವೆ ಅವರಿಗೆ ಸ್ಪಂದಿಸದಿದ್ದರೆ ಇನ್ನೇನು ಕೆಲಸ ಮಾಡುತ್ತೀರಿ. ನಿರ್ಲಕ್ಷ್ಯ ತೋರುವ, ಅಶಿಸ್ತು ತೋರುವ ಅಧಿಕಾರಿಗಳನ್ನು ಮುಲಾಜಿಲ್ಲದೆ ಅಮಾನತು ಮಾಡುವಂತೆ ತಾಕೀತು ಮಾಡಿದರು.
ತುಮಕೂರಿನ ಮಕ್ಕಳು ಅಷ್ಟು ದಡ್ಡರಲ್ಲ. ಫಲಿತಾಂಶದಲ್ಲಿ 30ನೇ ಸ್ಥಾನಕ್ಕೆ ಬಂದಿದ್ದೀವಿ. ಮುಖ್ಯಮಂತ್ರಿಗಳಿಗೆ ಏನೆಂದು ಉತ್ತರಿಸಬೇಕು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


