ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ತುಮಕೂರು ಇವರ ವತಿಯಿಂದ “ರೈತರ ತಾಕುಗಳಲ್ಲಿ ಪ್ರಾತ್ಯಕ್ಷತೆ ಕಾರ್ಯಕ್ರಮ” ತೆಂಗಿನ ಬೆಳೆಗಳಿಗೆ ರೋಗನಿರ್ವಹಣೆ ವಿಚಾರ ಸಂಕೀರ್ಣ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಎಂ.ಟಿ. ಕೃಷ್ಣಪ್ಪ, ಈ ಕಾರ್ಯಕ್ರಮಕ್ಕೆ ದಬ್ಬೇಘಟ್ಟ ಹೋಬಳಿಯಿಂದ ಸಾಕಷ್ಟು ರೈತರು ಬರುವ ನಿರೀಕ್ಷೆಯಿತ್ತು ತೋಟಗಾರಿಕಾ ಇಲಾಖೆಯ ಸಿಬ್ಬಂದಿಗಳಿಂದ ರೈತರಿಗೆ ಸರಿಯಾದ ಮಾಹಿತಿ ದೊರಕದೆ ರೈತರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಈ ಕಾರ್ಯಕ್ರಮ ನನಗೆ ತೃಪ್ತಿ ತಂದಿಲ್ಲ ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ರೈತರಿಗೆ ಸರಿಯಾಗಿ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ದಬ್ಬೇಘಟ್ಟ ಹೋಬಳಿಯು ತೀರಾ ಹಿಂದುಳಿದಿದ್ದು ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ ಇದನ್ನು ಮನಗಂಡು ನಾನು ಕಳೆದ ಬಾರಿ ಶಾಸಕನಾಗಿದ್ದಾಗ ಮಲ್ಲಾಘಟ್ಟ ಹಿನ್ನೀರಿನಿಂದ ಏತನೀರಾವರಿಗೆ ಯೋಜನೆಯನ್ನು ರೂಪಿಸಿ, ಅದನ್ನು ಜಾರಿಗೊಳಿಸಲು ಸಾಕಷ್ಟು ಶ್ರಮವಹಿಸಿದ್ದೇನೆ. ಇದರಿಂದ ಹೋಬಳಿಯ ಸುಮಾರು ಕೆರೆಗಳಿಗೆ ನೀರು ಹರಿಯಲಿದ್ದು, ಈ ಭಾಗದ ರೈತರಿಗೆ ಉಪಯೋಗವಾಗಲಿದೆ ಹಾಗೂ ರೈತರ ಋಣ ತೀರಿಸಲು ಸಣ್ಣ ಪ್ರಯತ್ನ ಮಾಡಿದ್ದೇನೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬರಗಾಲವಾಗಿರುವುದರಿಂದ ಪ್ರತಿ ಮನೆಮನೆಗೂ ತೆರಳಿ ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ರೈತರಿಗೆ ತಲುಪಿಸುವಂತ ಪ್ರಾಮಾಣಿಕ ಪ್ರಯತ್ನ ಮಾಡಿಯೆಂದು ಸೂಚಿಸಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ ಮಾತನಾಡಿ, ಈ ಹೋಬಳಿಯಲ್ಲಿ ತೆಂಗುಬೆಳೆಯ ಮತ್ತು ಅಡಿಕೆ ಬೆಳೆಯ ವಿಸ್ತೀರ್ಣ ವನ್ನು ತಿಳಿಸಿ, ರೈತರಿಗೆ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ತೆಂಗು ಬೆಳೆಗಳ ನಿರ್ವಹಣೆ ಮತ್ತು ರೋಗಗಳ ಬಗ್ಗೆ ಕೆವಿಕೆ ಕೊನೇಹಳ್ಳಿ ವಿಜ್ಞಾನಿ ಡಾ.ಕೀರ್ತಿಶಂಕರ ರವರು ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ ನೀಡಿದರು.
ರೈತರಿಗೆ ತೆಂಗು, ನಿಂಬೆ ,ಲವಂಗದ ಸಸಿಗಳು ಹಾಗೂ ಟ್ರೈಕೋಡರ್ಮಾ ಜೈವಿಕ ಗೊಬ್ಬರವನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಆರ್.ಜಯರಾಮ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಣ್ಣ, ಎ.ಪಿ.ಎಂ.ಸಿ. ಮಾಜಿಸದಸ್ಯ ವಿಜಯೇಂದ್ರ,ಬಿ.ಎಸ್ ದೇವರಾಜ್, ರಾಜ್ ಕುಮಾರ್, ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ರೇವಣ್ಣ ಸೇರಿದಂತೆ ರೈತರು ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ