ಚಿತ್ರದುರ್ಗ: ಜಿಲ್ಲೆಯಹಿರಿಯೂರು ತಾಲ್ಲೂಕಿನ ಹಿರಿಯೂರು ನಗರದಲ್ಲಿನ ನಗರಸಭೆ ಜಾಗಗಳನ್ನು ಗುರುತಿಸಿ, ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿರುವಂತಹ ಅನೇಕ ಉತ್ತಮ ಕೆಲಸ ಕೈಗೊಳ್ಳಲಾಗಿದ್ದು, ಈ ಬಗ್ಗೆ ಮೊನ್ನೆ ಚಿತ್ರದುರ್ಗದಲ್ಲಿ ನಡೆದ ಮೀಟಿಂಗ್ ನಲ್ಲಿ ಜಿಲ್ಲಾಧಿಕಾರಿಗಳು, ಹಿರಿಯೂರು ನಗರಸಭೆ ಉತ್ತಮ ಕೆಲಸ-ಕಾರ್ಯಗಳನ್ನು ಮಾಡುತ್ತಿದೆ, ಎಂಬುದಾಗಿ ಸರ್ಟಿಫಿಕೇಟ್ ಸಹ ನೀಡಿದ್ದಾರೆ ಆದರೆ ಕ್ಷೇತ್ರದ ಶಾಸಕರು ನಗರಸಭೆ ಆಡಳಿತ ಮಂಡಳಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವುದು ನಿಜಕ್ಕೂ ಸತ್ಯಕ್ಕೆ ದೂರವಾದ ಮಾತು ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾ ಹೇಳಿದರು.
ಹಿರಿಯೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಗರಸಭೆ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಂಷುನ್ನೀಸಾ, ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಮಾಧ್ಯಮಗಳಲ್ಲಿ ಮಾಡಿರುವ ಭ್ರಷ್ಟಾಚಾರದ ಆರೋಪಗಳ ಕುರಿತಂತೆ ಸ್ಪಷ್ಟೀಕರಣ ನೀಡಿದರು.
ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಮಾತನಾಡಿ, ನಗರಸಭೆ ವತಿಯಿಂದ ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಶಾಸಕರ ಆರೋಪಕ್ಕೆ ಉತ್ತರಿಸಿ, ನಾವು ನಗರಸಭೆಗೆ ಬರುವುದಕ್ಕಿಂತ ಮುಂಚಿತವಾಗಿ ಅಂದಿನ ಜಿಲ್ಲಾಧಿಕಾರಿಗಳೇ ಈ ಟೆಂಡರ್ ಕರೆದಿದ್ದು, ಅವರ ಕಾಲದಲ್ಲಿಯೇ ಅದರ ಬಿಲ್ಲು ಸಹ ಆಗಿ ಹೋಗಿದೆ, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಇದು ಸತ್ಯಕ್ಕೆ ದೂರವಾದ ಮಾತು ಎಂಬುದಾಗಿ ಹೇಳಿದರು.
ಆಶ್ರಯ ಸಮಿತಿ ಮನೆಗಳು ಹಾಗೂ ಸ್ಲಂ ಬೋರ್ಡ್ ಮನೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಶಾಸಕರ ಆರೋಪಕ್ಕೆ ಉತ್ತರಿಸಿದ ಪ್ರಕಾಶ್, ಆಶ್ರಯ ಸಮಿತಿ ಮನೆಗಳು ಹಾಗೂ ಸ್ಲಂ ಬೋರ್ಡ್ ಮನೆಗಳಾಗಲಿ ನಗರಸಭೆ ಕಚೇರಿ ವ್ಯಾಪ್ತಿಗೆ ಬರುತ್ತದೆ ಅಷ್ಟೇ, ಆದರೆ ಅದು ನೇರವಾಗಿ ಶಾಸಕರ ಆಡಳಿತ ಹಾಗೂ ನಗರಸಭೆ ಅಧ್ಯಕ್ಷರ ಅಧೀನದಲ್ಲಿ ಬರುತ್ತದೆ. ನಗರಸಭೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ನಾವು ಅದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.
ಶಾಸಕರು, ತಾನು ತಂದಿರುವ 100 ಕೋಟಿ ಅನುದಾನವನ್ನು ನಗರಸಭೆ ವತಿಯಿಂದ ಸುಳ್ಳು ಆರೋಪಗಳ ಪತ್ರ ಬರೆದು ಅನುದಾನವನ್ನು ವಾಪಸ್ಸು ಕಳುಹಿಸಲಾಗಿದೆ ಎಂಬ ಅರೋಪಕ್ಕೆ ಉತ್ತರಿಸಿದ ಅವರು, ನಮ್ಮ ಕೌನ್ಸಿಲ್ ಬಾಡಿ ಬರುವುದಕ್ಕೆ ಮುಂಚೆಯೇ ಆ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಈ ಕ್ರಿಯಾ ಯೋಜನೆಯಲ್ಲಿ ಮಾಡಿದ ಕಾಮಗಾರಿಗಳಿಗೆ ಮತ್ತೆ ಮತ್ತೆ ಟೆಂಡರ್ ಕರೆಯಲಾಗಿದ್ದು, ಸುಮಾರು 50 ಲಕ್ಷ ರೂಗಳ ಕಾಮಗಾರಿ ಡೂಪ್ಲಿಕೇಟ್ ಆಗಿರುತ್ತದೆ ಆದ್ದರಿಂದ ಈ ಹಣ ವಾಪಸ್ಸು ಹೋಗಿದೆ ಎಂದರು.
ಕರ್ನಾಟಕ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನಗರಸಭೆ ಹಾಗೂ ಪುರಸಭೆಗಳಿಗೆ ಕೊರೊನಾ ಕಾಲಾವಧಿಯಲ್ಲಿ ಎಸ್.ಎಫ್.ಸಿ. ಅನುದಾನದಡಿ ಪೂರ್ಣಗೊಂಡ ಕಾಮಗಾರಿಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಮಾಡಬಾರದು ಎಂಬುದಾಗಿ ಸರ್ಕಾರ ಸುತ್ತೋಲೆ ಸಹ ಹೊರಡಿಸಿದ್ದು, ಇದರಿಂದ ಎಲ್ಲಾ ನಗರಸಭೆಗಳಲ್ಲಿ ಆರ್ಥಿಕ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬುದಾಗಿ ಸುತ್ತೋಲೆಯನ್ನು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಿದರು.
ನಗರಸಭೆಯಲ್ಲಿ ಹಲವಾರು ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಮಾಡಿರುವ ಕ್ಷೇತ್ರದ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರು ಇದಕ್ಕೆ ಪೂರಕವಾದ ಸಾಕ್ಷಿ-ಪುರಾವೆಗಳೆನಾದರೂ ಅವರ ಬಳಿ ಇದ್ದರೆ ಅದನ್ನು ಸಾಬೀತುಪಡಿಸಲಿ, ಈ ರೀತಿ ನಿರಾಧಾರವಾಗಿ ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಕೌನ್ಸಿಲ್ ಬಾಡಿ ಮೇಲೆ ಆರೋಪ ಮಾಡುವುದು ಸರಿಯಲ್ಲ, ಅವರು ಆರೋಪ ಮಾಡಲೇಬೇಕೆಂಬ ಕಾರಣಕ್ಕೆ ಆರೋಪ ಮಾಡಿದ್ದಾರೆ ಎಂದರಲ್ಲದೆ, ನಮ್ಮ ಕಾಂಗ್ರೆಸ್ ಪಕ್ಷದ ನೇತೃತ್ವದ ಕೌನ್ಸಿಲ್ ಬಾಡಿ ಕಳೆದ ಒಂದು ವರ್ಷದಲ್ಲಿ ನಗರಸಭೆಯಲ್ಲಿ ಆಡಳಿತಾತ್ಮಕ ಸುಧಾರಣೆಗೋಸ್ಕರ ಅತ್ಯುತ್ತಮ ಕೆಲಸ-ಕಾರ್ಯಗಳನ್ನು ಮಾಡುತ್ತಲಿದ್ದು, ನಗರದಲ್ಲಿರುವ ಆಸ್ತಿಗಳ ತಿರುಚುವಿಕೆಯಾಗಬಾರದೆಂಬ ಉದ್ದೇಶದಿಂದ ಆಸ್ತಿಗಳ ವಿವರಗಳಷ್ಟನ್ನೂ ಸ್ಕ್ಯಾನ್ ಮಾಡಿಸಲಾಗಿದೆ, ಅಕ್ಕಪಕ್ಕದ ಪಂಚಾಯಿತಿಗಳಿಂದ ಬಂದಂತಹ ಖಾತೆಗಳನ್ನು ಸಹ ಅಪ್ ಡೆಟ್ ಮಾಡಿಸಿದ್ದೇವೆ ಅಲ್ಲದೆ ನಗರದ ನಾಗರಿಕರಿಗೆ, ಸ್ಪಂದಿಸುವಂತಹ ಆಡಳಿತ ನೀಡಿದ್ದೇವೆ ಎಂದು ಹೇಳಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy