ಬೆಂಗಳೂರು: ಕಳೆದ ಒಂದು ದಶಕದಲ್ಲಿ ಮೋದಿ ಸರ್ಕಾರವು ಎಲ್ಲಾ ಕಾರ್ಮಿಕ ಕಾನೂನುಗಳನ್ನು ಮತ್ತು ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ದುರ್ಬಲಗೊಳಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದರು.
ವಿಶೇಷ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ಕಾರ್ಮಿಕರು ಮತ್ತು ಕಾರ್ಮಿಕರ ಹಕ್ಕುಗಳನ್ನು ನಿರಂತರವಾಗಿ ರಕ್ಷಿಸುತ್ತ ಬಂದಿದೆ.
ಕೈಗಾರಿಕಾ ವಿವಾದಗಳ ಕಾಯಿದೆ, ಕಾರ್ಖಾನೆಗಳ ಕಾಯಿದೆ, ಕನಿಷ್ಠ ವೇತನ ಕಾಯಿದೆ, ಇಎಸ್ಐ ಕಾಯಿದೆ ಮತ್ತು ಇತರ ಹಲವು ಸೇರಿದಂತೆ ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರ ಸ್ಥಿತಿಗತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹಲವಾರು ಕಾನೂನುಗಳನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ಆದರೆ, ಇವುಗಳನ್ನು ಮೋದಿ ಸರ್ಕಾರ ದುರ್ಬಲ ಮಾಡಿದೆ ಎಂದರು.
ನರೇಗಾ ಯೋಜನೆ ಅಡಿ ಕಾರ್ಮಿಕ ಹಣ ಪಾವತಿ ಆಗುತ್ತಿಲ್ಲ. ನಮ್ಮ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತದೆ. ಕೇಂದ್ರ ಸರಿಯಾದ ಸಮಯಕ್ಕೆ ಅನುದಾನ ನೀಡಿದರೆ ಯೋಜನೆಗಳು ಸರಿಯಾದ ಸಮಯಕ್ಕೆ ಆರಂಭವಾಗುತ್ತದೆ. ಆದರೆ, ತನ್ನ ಪಾಲು ಕೇಳಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಅನೇಕ ಪತ್ರ ಬರೆದಿದೆ. ಆದರೆ, ಕೇಂದ್ರ ಸ್ಪಂದಿಸಿಲ್ಲ’ ಎಂದು ದೂರಿದರು.
‘ನರೇಗಾ ಯೋಜನೆಗಳ ಬಗ್ಗೆ ಮೋದಿಗೆ ಆಸಕ್ತಿ ಇಲ್ಲ. ಇಂತಹ ಯೋಜನೆಗಳ ಬಗ್ಗೆ ಮೋದಿ ಸರ್ಕಾರ ನಿರ್ಲಕ್ಷ ವಹಿಸುತ್ತಿದೆ. ಮೋದಿಗೆ ಬಡವರ ಮೇಲೆ ಕಾಳಜಿ ಇಲ್ಲ. ಬಡ ಮತ್ತು ಶ್ರೀಮಂತರ ನಡುವೆ ಇರುವ ಅಂತರ ಕಡಿಮೆ ಮಾಡುವುದು ಜಾತಿಗಣತಿ ಮಾಡುವ ನಮ್ಮ ಗ್ಯಾರಂಟಿಯ ಉದ್ದೇಶ. ಇದರಿಂದ ಸಮುದಾಯಗಳ ಅಭಿವೃದ್ಧಿ ವಿಚಾರಕ್ಕೆ ಅನುಕೂಲ ಆಗಲಿದೆ. ಶಿಕ್ಷಣ ಮತ್ತು ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ. ಕರ್ನಾಟಕ ಈಗಾಗಲೇ ಜಾತಿ ಗಣತಿ ವರದಿ ಸ್ವೀಕರಿಸಿದೆ. ಆದರೆ ಮೋದಿ ಮಾತ್ರ ಜಾತಿಗಣತಿಗೆ ವಿರೋಧ ಮಾಡುತ್ತಿದ್ದಾರೆ. ಜಾತಿಯಿಂದ ಹೊರಬರುವುದು ಮೋದಿಗೆ ಇಷ್ಟವಿಲ್ಲ. ಮೋದಿ ಒಬ್ಬ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದರೂ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿ ಮಾಡುವುದು ಗ್ಯಾರಂಟಿ’ ಎಂದರು.
ಇನ್ನು ಜಾತಿಗಣತಿಗೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಐಸಿಸಿ ಮಟ್ಟದಿಂದ ನಾನು ಈ ಮಾತು ಹೇಳುತ್ತಿದ್ದೇನೆ. ಮುಂದೆ ಪಕ್ಷಕ್ಕೆ ಯಾರೇ ಬಂದರೂ ಇದನ್ನು ಪಾಲಿಸಬೇಕು’ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


