ಬೆಂಗಳೂರು: ಮನೆಯ ಹಣಕಾಸು ವ್ಯವಹಾರ ತಾನೇ ನೋಡಿಕೊಳ್ಳಬೇಕು ಎಂದು ಯೋಚಿಸಿದ್ದ ಸೊಸೆ ಪ್ರಿಯಕರ ಜೊತೆ ಸೇರಿ ಅತ್ತೆಯನ್ನ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳು ಜೈಲು ಪಾಲಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆ ಆರೋಪಿಗಳನ್ನು ಸೊಸೆ ರಶ್ಮಿ ಅಕ್ಷಯ್ ಮತ್ತು ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಮಂಜುನಾಥ್ ಎಂಬುವವನ ಜೊತೆ ರಶ್ಮಿಯ ವಿವಾಹವಾಗಿತ್ತು . ಅದೇ ಮನೆಯ ಮಹಡಿಯಲ್ಲಿಯೇ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ರಶ್ಮಿ ಸಂಪರ್ಕ ಹೊಂದಿದ್ದಳು.
ಮನೆಯಲ್ಲಿ ಅತ್ತೆ ಲಕ್ಷ್ಮಮ್ಮ ಜೊತೆ ಹಣಕಾಸು ವಿಚಾರದಲ್ಲಿ ರಶ್ಮಿ ಆಗಾಗ್ಗೆ ಗಲಾಟೆ ನಡೆಸುತ್ತಿದ್ದು, ವ್ಯವಹಾರಗಳನ್ನು ತಾನೇ ನೋಡಿಕೊಳ್ಳುವ ಯೋಜನೆ ರೂಪಿಸಿದ್ದಳು. ಹೀಗಾಗಿ ಮನೆಯಲ್ಲಿ ಗಂಡ ಇಲ್ಲದ ವೇಳೆ ಕಳೆದ ಅ.5 ರಂದು ಅತ್ತೆಗೆ ಮತ್ತು ಬರುವ ಮಾತ್ರೆ ನೀಡಿ ರಶ್ಮಿ ಹಾಗೂ ಅಕ್ಷಯ್ ಮತ್ತು ಪುರುಷೋತ್ತಮ್ ಮೂರು ಜನ ಸೇರಿ ಕತ್ತು ಹಿಸುಕಿ ಲಕ್ಷ್ಮಮ್ಮ ಅವರನ್ನು ಹತ್ಯೆ ಮಾಡಿ ಬಳಿಕ ಹೃದಯಾಘಾತವಾಗಿದೆ ಎಂದು ನಾಟಕವಾಡಿದ್ದಾರೆ.


