ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಬರಗೂರು ಕ್ಲಸ್ಟರ್ ವ್ಯಾಪ್ತಿಯ ಯರೇಕಟ್ಟೆ ಸರ್ಕಾರಿ ಶಾಲೆಗೆ 10 ವರ್ಷಗಳ ನಂತರ ಗ್ರಾಮಸ್ಥರು ಮರುಜೀವ ನೀಡಿದ್ದಾರೆ ಈ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆ ಮುಚ್ಚಿ ಹೋಗಿತ್ತು. ಇದೀಗ ಮತ್ತೆ ಈ ಶಾಲೆಯಲ್ಲಿ ಪುಣಾಣಿ ಮಕ್ಕಳು ಕಲಿಯಲು ಆಗಮಿಸಿದ್ದಾರೆ.
ಈ ಗ್ರಾಮದಲ್ಲಿ 30 ಕುಟುಂಬಗಳಿದ್ದು, ಇಲ್ಲಿನ ಮಕ್ಕಳು ಪಕ್ಕದ ಗ್ರಾಮದ ಶಾಲೆಗಳಿಗೆ ಹೋಗುತ್ತಿದ್ದರು. ಹೀಗಾಗಿ ಗ್ರಾಮದಲ್ಲಿ ಒಂದು ಶಾಲೆ ಬೇಕು ಎಂದು ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರು. ಅದರಂತೆ ಮೂರು ದಶಕಗಳ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿತ್ತು. ಆ ಬಳಿಕ ವಿದ್ಯಾರ್ಥಿಗಳ ಕೊರತೆ ಕಾಡಿದ್ದರಿಂದಾಗಿ 10 ವರ್ಷಗಳ ಹಿಂದೆ ಈ ಶಾಲೆಯನ್ನು ಮುಚ್ಚಲಾಗಿತ್ತು.
ಇದೀಗ ಕೊವಿಡ್ ಸಂಕಷ್ಟ ಈ ಎಲ್ಲ ಕಾರಣಗಳ ನಡುವೆಯೇ ಗ್ರಾಮದ ಯುವಕರು ಗ್ರಾಮಸಭೆ ನಡೆಸಿ, ತಮ್ಮ ಊರಿನ ಶಾಲೆಯನ್ನು ಮತ್ತೆ ಆರಂಭಿಸಬೇಕು ಎಂದು ಪಣತೊಟ್ಟು ಶಾಲೆ ಆರಂಭಕ್ಕೆ ಮುನ್ನುಡಿ ಬರೆದಿದ್ದು, ಇದೀಗ 1ರಿಂದ 4ನೇ ತರಗತಿಯವರೆಗೆ ಒಟ್ಟು 16 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಮೂಲಕ ಮುಚ್ಚಿ ಹೋಗಿದ್ದ ಶಾಲೆಯಲ್ಲಿ ಮಕ್ಕಳು ಮತ್ತೆ ವಿದ್ಯಾಭ್ಯಾಸ ನಡೆಸಲು ಆರಂಭಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700